ರಾಷ್ಟ್ರೀಯ ವಿಜ್ಞಾನ ದಿನದ ವಿಶೇಷ ಲೇಖನ

ಜನತೆಗಾಗಿ ವಿಜ್ಞಾನ ವಿಜ್ಞಾನಕ್ಕಾಗಿ ಜನತೆಯ ರಾಷ್ಟ್ರೀಯ ವಿಜ್ಞಾನ ದಿನ 


ಅಹಮದ್‌ ಹಗರೆ, ಬಿ ಜಿ ವಿ ಎಸ್‌, ಹಾಸನ

ಫೆಬ್ರವರಿ ೨೮ ಭಾರತಕ್ಕೆ ಅತ್ಯಂತ ಮಹತ್ತರ ದಿನ. ಏಕೆ? ವಿಜ್ಞಾನ ಕ್ಷೇತ್ರದಲ್ಲಿ ಬ್ರಿಟೀಶ್ ಭಾರತಕ್ಕೆ ಮೊಟ್ಟಮೊದಲ ಮತ್ತು ಕಟ್ಟಕಡೆಯ ನೊಬೆಲ್ ಪಾರಿತೋಷಕ ಲಬಿಸಿದ ದಿನ. ಭಾರತರತ್ನ ಸರ್.ಸಿ.ವಿ ರಾಮನ್ನರು ಬ್ರ್ರಿಟಿಷ್ ಧ್ವಜದಡಿ ಅಳುಕುತ್ತಾ ಬೆಳಕಿನ ಚದುರುವಿಕೆಯ ಹಿಂದಿರುವ ವಿಜ್ಞಾನದ ಸತ್ಯವನ್ನು ಜಗತ್ತಿಗೆ ಅರಿವು ಮಾಡಿಸಿ ಸ್ವತಂತ್ರ ಭಾರತ ವಿಜ್ಞಾನದ ಹಾದಿಯಲ್ಲಿ ಸಾಗಲಿ ಎಂದು ಬಾಂದುಗಲ್ಲು ನೆಟ್ಟುಕೊಟ್ಟ ದಿನ.

ಒಂದು ದೇಶದ ಅಭಿವೃದ್ಧಿಯನ್ನ ಅಳೆಯಬೇಕಾದರೆ ಆ ದೇಶದ ಜನರ ಜೀವನ ಮಟ್ಟದ ಸುಧಾರಣೆ ಎಷ್ಟು ಆಗಿದೆ ಎನ್ನುವುದರ ನೆಲೆಯಲ್ಲಿ ಆಗುತ್ತದೆ. ಜೀವನ ಮಟ್ಟ ಎಂದರೆ ಶಿಕ್ಷಣದ ಲಭ್ಯತೆ ಮತ್ತು ಪ್ರಗತಿ, ಆರೋಗ್ಯದ ಲಭ್ಯತೆ ಮತ್ತು ಸುಧಾರಣೆ, ವಸತಿ ಕಲ್ಪಸಿಕೊಡುವಿಕೆ, ಉದ್ಯೋಗ ಮತ್ತು ಉದ್ಯೋಗ ಭದ್ರತೆ. ಇವಿಷ್ಟೂ ಒಬ್ಬ ಮನುಷ್ಯ/ಕುಟುಂಬ ಅಭದ್ರತೆಯಿಂದ ಬದುಕಲು ಬೇಕಾಗುವ ನೆಲೆಗಟ್ಟು. ಇದರ ಸಾಧನೆಯ ಹಾದಿಯ ಮಾನದಂಡವನ್ನು ಪರ್ಸೆಂಟೇಜಿನಲ್ಲಿ ಲೆಕ್ಕ ಹಾಕಲಾಗುತ್ತದೆ. ಅದರ ಜೊತೆ ಅತಿ ಮುಖ್ಯವಾಗಿ ಆ ದೇಶಕ್ಕೆ ವಿಜ್ಞಾನದಲ್ಲಿ ಎಷ್ಟು ನೊಬೆಲ್ ಪಾರಿತೋಷಕ ಬಂದಿದೆ ಎಂಬುದರ ಅಡಿಯಲ್ಲೂ ಲೆಕ್ಕಹಾಕಬೇಕು ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಲೆಕ್ಕಹಾಕಿ ಘೋಷಿಸುತ್ತವೆ ಕೂಡ. ಈ ನಿಟ್ಟಿನಲ್ಲಿ ಭಾರತಕ್ಕೆ ಇಲ್ಲಿಯವರೆಗೂ ಒಂದೇ ಒಂದು ನೊಬೆಲ್ ಪಾರಿತೋಷಕ ಲಭಿಸಿಲ್ಲ!. ನೊಬೆಲ್‌ಗಳೆಲ್ಲವನ್ನೂ ಶ್ರೀಮಂತ ದೇಶಗಳೆ ಬಾಚಿಕೊಂಡಿರುವುದು. ಸ್ವತಂತ್ರ ಭಾರತಕ್ಕಿಂತ ಬ್ರಿಟಿಷ್ ಭಾರತವೆ ಈ ನಿಟ್ಟಿನಲ್ಲಿ ಧನ್ಯ.!

 ಇತ್ತೀಚೆಗೆ ಯೂರೋಪಿನ ಸಂಸ್ಥೆಯೊಂದು ವಿಶ್ವದ ಸರ್ವಶ್ರೇಷ್ಠ ಸಮಕಾಲೀನ ವಿಜ್ಞಾನಿಗಳನ್ನು ಪಟ್ಟಿ ಮಾಡಿತು ಅದರಲ್ಲಿ ಭಾರತದ ಪ್ರಾತಿನಿದಿತ್ವ ಕೇವಲ ೧೨, ಪಕ್ಕದ ಚೈನಾದ್ದು ೪೦೦ ಒಟ್ಟು ಪಟ್ಟಿ ಮಾಡಿದ ಶ್ರೇಷ್ಠ ವಿಜ್ಞಾನಿಗಳ ಲೆಕ್ಕ ೪೦೦೦. ಈಗ ಯೋಚಿಸಿ ಭಾರತ ಅರಳುವುದು ಹೇಗೆ? ನಮಗೆ ಸ್ವಾತಂತ್ರ ಲಭಿಸಿ ೭೨ವರ್ಷವಾಯಿತು ಇನ್ನೂ ಒಂದೂ ನೊಬೆಲ್(ವಿಜ್ಞಾನ ಕ್ಷೇತ್ರದಲ್ಲಿ) ಪಡೆಂiiಲಾಗಿಲ್ಲ ಎನ್ನುವುದು ನಾಚಿಗೆಗೇಡು. ವಿಜ್ಞಾನ ವಿಕಾಸವಾಗದೆ ಭಾರತ ಅಲ್ಲ ಯಾವುದೇ ದೇಶ ಅಭಿವೃದ್ಧಿ ಸಾಲಿನಲ್ಲಿ ನಡೆಯಲು ಸಾಧ್ಯವಾಗದು. 

ವಿಜ್ಞಾನ ಬಿಟ್ಟು ಬರಿ ಅಲ್ಲಾನನ್ನೆ ಸರ್‍ವಶ್ರೇಷ್ಠ ಎಂದು ಅಂಟಿಕೂತ ಇಸ್ಲಾಮಿಕ್ ದೇಶಗಳು ಬಡತನದ ಬೇಗುದಿಯಲ್ಲಿ ಬೇಯುತ್ತಿವೆ, ಭಯೋತ್ಪಾದನೆಯ ತಾಣವಾಗಿ ಆತಂಕಗೊಂಡಿವೆ. ಕೊಲ್ಲಿಯ ಇಸ್ಲಾಂ ದೇಶಗಳು ಅಮೇರಿಕನ್ನರ ಕೃಪಾಕಟಾಕ್ಷದಿಂದ ಅವರ ವಿಜ್ಞಾನದ ನೆರಳಲ್ಲಿ ಎಣ್ಣೆ ಬಾವಿಗಳಿಂದ ಹಣದ ಹೊಳೆ ಹರಿದರೂ ಅದನ್ನು ರಿಫೈನ್ ಮಾಡಿಕೊಡಲು ಅಮೆರಿಕಾದ ವಿಜ್ಞಾನಿಗಳೆ ಬೇಕು. ಅವು ಬರಿ ಮುಲ್ಲಾಗಳನ್ನೇ ತಯಾರಿಸುತ್ತಿವೆ, ವಿಜ್ಞಾನಿಗಳನ್ನಲ್ಲ. ಧರ್ಮದ ಹೊದಿಕೆ ಕಳಚಿಕೊಂಡು ವಿಜ್ಞಾನ ಆಶ್ರಯಿಸಿದ ಪಶ್ಚಿಮದ ದೇಶಗಳು ಜಗತ್ತನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಜಗವನ್ನಾಳುತ್ತಾ ಶ್ರೀಮಂತವಾಗಿ ಬೆಳೆಯುತ್ತಿವೆ.

 ಇನ್ನು ಭಾರತ ಹಳೆಯ ಕಂದಾಚಾರಗಳ ನೆರಳಲ್ಲೆ ಉಸಿರಾಡುತ್ತಿದೆ. ತನ್ನ ದೇಶದ ವಿಜ್ಞಾನವನ್ನ ಧರ್ಮದ ನೆರಳಲ್ಲೆ ಉಸಿರುಸುತ್ತಿದೆ. ಜಗತ್ತಿನ ಸಂಶೋಧನೆಗಳನ್ನೆಲ್ಲಾ ತಾನೇ ಪೇಟೆಂಟ್ ಪಡೆದುಕೊಳ್ಳುವ ದುಸ್ಸಾಹಸವನ್ನು ಇತ್ತೀಚೆಗೆ ಹೆಚ್ಚಾಗಿ ಮಾತಾಡುತ್ತಿವೆ. ತ್ರಿಪುರಾದ ಮುಖ್ಯಮಂತ್ರಿಗಳು ವಿಮಾನ ನಾವೆ ಕಂಡು ಹಿಡಿದಿದ್ದು, ಮಹಾಭಾರತ ಕಾಲದಲ್ಲೇ ಟಿವಿ, ಮೊಬೈಲುಗಳು ಬಳಕೆಯಲ್ಲಿದ್ದವು ಎಂದು ಸಾರ್ವಜನಿಕ ಭಾಷಣ ಬಿಗಿಯುತ್ತಿದ್ದಾರೆ. ಕೇಂದ್ರದ ವಿಜ್ಞಾನ ತಂತ್ರಜ್ಞಾನ ಮಂತ್ರಿಗಳು ವಿಕಾಸವಾದ ಸುಳ್ಳು ಅದನ್ನು ಶಾಲೆಯಲ್ಲಿ ಕಲಿಸಬಾರದು ಎಂದು ಫರ್ಮಾನು ಹೊರಡಿಸುತ್ತಾರೆ, ಬಹುತೇಕ ಭಾರತದ ಪಂಡಿತೋತ್ತಮರು ಕ್ವಾಂಟಮ್ ಸಿದ್ಧಾಂತವನ್ನ ಶಂಕರಾಚಾರ್ಯರ ಅಧ್ವೈತದಲ್ಲೂ, ಬ್ಲಾಕ್ ಹೋಲ್ ಅನ್ನು ಕೃಷ್ಣನ ಚಕ್ರದಲ್ಲೂ, ಸಾಪೇಕ್ಷ ಸಿದ್ದಾಂತವನ್ನ ವೇದಗಳಲ್ಲೂ ಹುಡುಕಿ ತೋರುತ್ತಾರೆ. ಆದರೂ ಭಾರತದ ಸಾಮಾನ್ಯ ಕುಟುಂಬ ಬದುಕಿನ ಅಭದ್ರತೆಯಿಂದ ಗಟ್ಟಿಯಾಗಿ ಬಳಲುತ್ತಿರುವುದು ಗೋಚರಿಸುತ್ತದೆ. ಭಾರತ ಅದಾನಿ-ಅಂಬಾನಿಗಳ ಹೊಳೆಯುವ ಪಾದದ ಕೆಳಗೆ ನರಳುತ್ತಿದೆ. ಇದನ್ನು ಗುರುತಿಸಲು ಅವರು ಮನಸ್ಸೇ ಮಾಡುತ್ತಿಲ್ಲ.

ಇಷ್ಟೆಲ್ಲಾ ಹೇಳಲಿಕ್ಕೆ ಕಾರಣ ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನದ ಘೋಷಣೆ ಜಾಗತಿಕ ನೆಮ್ಮದಿಗಾಗಿ ಜಾಗತಿಕ ವಿಜ್ಞಾನ ಮೋದಿಯವರು ಪ್ರದಾನಿ ಆದಾಗ(೨೦೧೪) ಕೊಟ್ಟ ಘೋಷಣೆ, ವಿಜ್ಞಾನ ಭಾರತಕ್ಕೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಬೆಳಿತಾ..?. ೨೦೧೫ರಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ವಿಜ್ಞಾನ, ೨೦೧೮ರಲ್ಲಿ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದು ೨೦೧೯ರಲ್ಲಿ ಭಾರತಕ್ಕಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಭಾರತ! ಘೋಷಣೆ ನೀಡಲಾಯಿತು. ಭಾರಿ ಭಾರಿ ಭಾಷಣವೂ ಮಾಡಲಾಯಿತು. ಆದರೆ ಮರುದಿನದಿಂದಲೇ ಮೌಢ್ಯಾಲಿಂಗನಗಳೆ ನೀರು-ಗೊಬ್ಬರ ಎರೆದು ಪೋಷಿಸಲಾಗುತ್ತಿದೆ.

 ಸನ್ಮಾನ್ಯ ಪ್ರಧಾನ ಮಂತ್ರಿಗಳು ಎರಡು ಪ್ರಮುಖ ಘೋಷಣೆಯನ್ನ ೨೦೧೪ರಲ್ಲಿ ಘೋಷಿಸಿದ್ದರು ಒಂದು ಮೇಕ್ ಇನ್ ಇಂಡಿಯ ಮತ್ತೊಂದು ಡಿಜಿಟಲ್ ಇಂಡಿಯ ಇವೆರೆಡೂ ಅವರು ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ. ಅವರಿಗೆ ಕಾರಣ ಹೊಳೆಯಿತು ಇವೆರೆಡೂ ಯಶಸ್ವಿಯಾಗಲಿಕ್ಕೆ ಭಾರತ ವಿಜ್ಞಾನದಲ್ಲಿ ಸ್ವಾವಲಂಬಿಯಾಗಬೇಕು ಎನ್ನುವುದು. ದುರದೃಷ್ಠ ಅವರ ಪಕ್ಷ ಮತ್ತು ಸಿದ್ದಾಂತ ವಿಜ್ಞಾನದ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟಿಲ್ಲ ಕೇವಲ ಅವುಗಳ ಫಲಶೃತಿಗಳ ಅನುಭವಿಸುವಿಕೆಯ ಮೇಲಷ್ಟೆ ಅವಲಂಬಿಸಿವೆ. ಹಾಗಾಗಿಯೆ ಅವರ ಮಂತ್ರಿಗಳು ವಿಜ್ಞಾನ ವಿರೋಧಿ ಹೇಳಿಕೆಗಳನ್ನ ನೀಡುತ್ತಿರುವುದು. 

ಭಾರತ ವಿಜ್ಞಾನ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದರೆ ಪ್ರಧಾನಿಗಳು ಕನಸಿದ ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ಸಾಕಾರಗೊಳಿಸಲು ಸಾಧ್ಯ. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ ನೆಹರು ಭಾರತದ ಸಂವಿಧಾನ ಈ ದೇಶಕ್ಕೆ ಅರ್ಪಿಸಿ ಗಣತಂತ್ರ ಒಪ್ಪಿಕೊಂಡ ಮೇಲೆ ವಿಜ್ಞಾನ ನೀತಿ ನಿರ್ಣಯ ಸಂಸತ್ತಿನಲ್ಲಿ ಮಂಡನೆ ಮಾಡುತ್ತಾ ಭಾರತ ಮತ್ತು ಭಾರತದ ಜನತೆಯನ್ನು ಭಾದಿಸುತ್ತಿರುವ "ಹಸಿವು ಮತ್ತು ದಾರಿದ್ರ್ಯ, ಅನಾರೋಗ್ಯ ಮತ್ತು ಅನಕ್ಷರತೆ, ಮೂಢನಂಬಿಕೆ ಮತ್ತು ಜಡ್ಡುಗಟ್ಟಿದ ಆಚರಣೆಗಳಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವಿಜ್ಞಾನ ಒಂದರಿಂದಲೇ ಸಾಧ್ಯ ಹಾಗಾಗಿ ವಿಜ್ಞಾನ ಒಂದು ಸ್ವತಂತ್ರಮಾನವನ ಚೇತನ ಇದು ದೇಶಕ್ಕೆ ವಿಜ್ಞಾನದ ಸಾಧನಗಳನ್ನು ಕೊಡುತ್ತದೆ, ಜೀವನದ ಮೌಲ್ಯಗಳನ್ನು ಉತ್ತಮಗೊಳಿಸುತ್ತದೆ, ಇದು ಭಾರತೀಯ ನಾಗರೀಕತೆಗೆ ಹೊಸ ಚೈತನ್ಯ ಮತ್ತು ನವನವೀನ ಶಕ್ತಿ ನೀಡುತ್ತದೆ ಹಾಗಾಗಿ ಭಾರತೀಯರೆಲ್ಲರೂ ಹಳೆ ನಂಬಿಕೆಗೆ ಬದಲಾಗಿ ಹೊಸ ವಿಜ್ಞಾನಾಧಾರಿತ ನಂಬಿಕೆಗಳನ್ನ ಮೈಗೂಡಿಸಿಕೊಳ್ಳುವುದು ಅಗತ್ಯ ಎಂದು ವಿವರಿಸಿದ್ದರು. ಮತ್ತು ಇದು ಸುಧೀರ್ಘ ಚರ್ಚೆಯ ನಂತರ ಅಂಗೀಕಾರವಾಗಿತ್ತು ಆದರೆ ಯಾವ ಪ್ರಮಾಣದಲ್ಲಿ ಜಾರಿಗೊಳಿಸಬೇಕಿತ್ತೋ ಅದು ಆಗಲಿಲ್ಲ. ಈ ಕಾರಣಕ್ಕಾಗೆ ಕಾಂಗ್ರೆಸ್ ಮಣ್ಣು ಮುಕ್ಕಿತು, ಕಂದಾಚಾರ ಇನ್ನಿಲ್ಲದಂತೆ ಬೆಳೆದು ಪಾಳೆಗಾರಿ ಪ್ರಭುತ್ವ ತಲೆ ಎತ್ತಿ ವಿಜ್ಞಾನವನ್ನು ಕೇವಲ ಉಪಭೂಗ ವಸ್ತುವಾಗಿ ಮಾಡಿತು. ಇಂದು ನಮ್ಮೆದುರು ನಿಂತಿರುವುದು ದೂರದೂರದ ದೃಷ್ಠಿ ಇದೆ ಎಂದು ಬಿಂಬಿತವಾಗಿರುವ ೫೬ ಇಂಚಿನ ಎದೆಯ ಚೌಕಿದಾರ. ಈ ನೆಹರು ನಿರ್ಣಯವನ್ನ ಜಾರಿಗೊಳಿಸಿಲು ಬಿಗಿ ಕಮ್ರ ಕೈಗೊಳ್ಳಬೇಕಿದೆ ಆಗ ವಿಜ್ಞಾನ ದಿನದ ಘೋಷಣೆ ಭಾರತವನ್ನು ಎದ್ದು ನಿಲ್ಲಿಸುವುದು. 

ಜನತೆಗಾಗಿ ವಿಜ್ಞಾನ ವಿಜ್ಞಾನಕ್ಕಾಗಿ ಜನತೆ

ಈ ಘೋಷಣೆಯನ್ನ ಕುವೆಂಪು ೫೦ವರ್ಷಗಳ ಹಿಂದೆಯೆ ಕೊಟ್ಟಿದ್ದರು. ಬಡತನವನ್ನ ಬುಡಮಟ್ಟ ಕೀಳಲಿಕ್ಕೆ ಗುಡಿ, ಚರ್ಚು, ಮಸೀದಿಗಳನ್ನ ಬಿಟ್ಟು ಹೊರಬರಲು ಜ್ಞಾನಭಾರತಿಯ ಪ್ರಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಂದಿನ ವಿದ್ಯಾರ್ಥಿಗಳಿಗೆ ಕರೆಕೊಟ್ಟಿದ್ದರು. ನಮ್ಮ ಹಿರಿಯರು ತ್ಯಾಗ ಬಲಿದಾನಗಳಿಂದ ತಂದುಕೊಟ್ಟ ಸ್ವಾತಂತ್ರ್ಯಸಿದ್ಧಿಯನ್ನ ಪುನಃ ವೇದ ಪ್ರಾಮಣ್ಯದ ಮರು ಮರೀಚಿಕೆಯಲ್ಲಿ ಅದ್ದಿ ಹಾಳು ಮಾಡಬೇಡಿ ಹಳೆ ಮತದ ಕೊಳೆಯೆಲ್ಲವನ್ನ ಹೊಸ ಮತಿಯ ಹೊಳೆಯಲ್ಲಿ ತಿಕ್ಕಿತೊಳೆದು ವಿಜ್ಞಾನ ಬುದ್ದಿ ಬೆಳೆಸಿಕೊಂಡು, ವೈಚಾರಿಕತೆಯನ್ನು ಮೈಗಾನಿಸಿಕೊಂಡು, ಪೂರ್ಣದೃಷ್ಠಿ ಅಂಕುರಿಸಿಕೊಂಡು ಮನುಜಮತ ಕಟ್ಟಿ, ವಿಶ್ವಪಥದತ್ತ ಸಾಗಿ ಸರ್ವೋದಯದಲ್ಲಿ ಸಮತ್ವತೆಯನ್ನ ಸಾಧಿಸಿ ಭಾರತಕ್ಕೆ ಹೊಸಬೆಳಕು ನೀಡಿ ಎಂದು ಮಾರ್ಮಿಕವಾಗಿ ಎಚ್ಚರಿಸಿದ್ದರು. ಈ ವಿದ್ಯಾರ್ಥಿಗಳನ್ನ ಅಭಿವೃದ್ಧಿ ಹಾದಿಯ ಭಾರತದಲ್ಲಿ ಮುನ್ನಡೆಸಲಿಕ್ಕೆ ಗುರುಗಳು ವಿಜ್ಞಾನವನ್ನ ಮೊದಲು ಎದೆಗಾನಿಸಿಕೊಳ್ಳಬೇಕು, ವಿಜ್ಞಾನದ ಸರಕನ್ನೊತ್ತ ಹೇಸರಗತ್ತೆಗಳಾಗಬಾರದು ಎಂದೂ ಕೂಡ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈಗ ಆ ಗುರು ಮೋದಿಯ ಹೆಗಲ ಮೇಲಿದ್ದಾನೆ. ಈ ಮೋದಿ ಆರ್.ಎಸ್.ಎಸ್.ನ ಅಪದ್ಧ ವಿಜ್ಞಾನದ ಅಜ್ಞಾನ ಕೊಡವಿ, ಪುರಾತನ ಕಮರಿಯೊಳಗಿನಿಂದ ಹೊರಬಂದು ವಿಜ್ಞಾನ ದೀವಿಗೆ ಹಿಡಿಯಬೇಕು. ನಮ್ಮ ಸಂವಿಧಾನದ ಪರಿಚ್ಚೇದ ಮೂಲಭೂತ ಕರ್ತವ್ಯಗಳು ಭಾಗ ೪ಎ, ಆರ್‍ಟಿಕಲ್ ೫೧ ಂ(ಊ) ನಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು ಹಾಗೂ ಇತರರಲ್ಲಿ ವೈಜ್ಞಾನಿಕತೆಯನ್ನು ಬಿತ್ತುವುದು, ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಳ್ಳುವುದು ಹಾಗೂ ಸಂಶೋಧನಾ ಗುಣಗಳನ್ನು ಉತ್ತೇಜಿಸುವುದು ಹಾಗೂ ಅದನ್ನು ಅಭಿವೃದ್ದಿ ಪಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯಗಳು ಎಂದು ಹೇಳಿದೆಯಲ್ಲ ಅದನ್ನು ಚಾಚೂ ತಪ್ಪದೆ ಪಾಲಿಸಲು ನೀತಿಗಳನ್ನ ರೂಪಿಸಬೇಕು.

ಇನ್ನು ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ರಂಗದ ಚಿಂತನೆಗಳು ಸಂವಿಧಾನದಲ್ಲಿ ನಂಬಿಕೆ ಇರಿಸಬೇಕು, ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಬೋಧನೆ ಮಾಡಬೇಕು, ಕಥೆ, ಧಾರಾವಾಹಿಗಳನ್ನ ಹೆಣೆಯಬೇಕು. ದೇಶದ ಶಿಕ್ಷಣ ಮೂಲವಿಜ್ಞಾನವನ್ನು ಕಟ್ಟುವಲ್ಲಿ ಸೋತಿದೆ ಕೇವಲ ತಂತ್ರಜ್ಞಾನದ ಮುಖ ಮಾಡಿವೆ. ವಿಜ್ಞಾನಿಗಳು ಸೃಜನವಾಗುವುದು ಮೂಲವಿಜ್ಞಾನದಿಂದ ಮಾತ್ರ ಭೌತ, ಜೀವ ರಸಾಯನ ವಿಜ್ಞಾನ ಪುಟಿದೆದ್ದು ಬರಬೇಕು ಭಾರತವನ್ನು ವಿಜ್ಞಾನದ ಅಂಗಳ ಮಾಡಬೇಕು ನೊಬೆಲ್‌ಗಳು ಭಾರತದತ್ತ ಹರಿದು ಬರಬೇಕು ಭಾರತ ಸೂಪರ್ ಪವರ್ ಆಗ ಮಾತ್ರ ಆಗಲುಸಾಧ್ಯ. ೨೦೧೯ರ ವಿಜ್ಞಾನ ದಿನಾಚರಣೆಯ ಘೋಷಣೆ  ಮತ್ತೊಮ್ಮೆ ರಾಮನ್ನರಂತವರನ್ನ ಈ ನೆಲದಲ್ಲಿ ಸೃಷ್ಠಿಸುವ ಛಾತಿ ಮೂಡಿಸಲಿ. 

ಹಸಿವು, ಬಡತನ, ಅನಕ್ಷರತೆ, ಮೂಢನಂಬಿಕೆ, ನಿರುದ್ಯೋಗದಿಂದ ನರಳುತ್ತಿರುವ ಭಾರತಕ್ಕೆ ಹೊಳೆಯುವ ಚೈತನ್ಯ ತರಲಿ.

ರಾಮನ್ನರಿಗೆ ಜಗನ್ಮನ್ನಣೆ ತಂದು ಕೊಟ್ಟ ಸಂಶೋಧನೆಯ ಸಾರವೇನು?


ಬೆಳಗಿನ ಬಿಸಿಲು ಕೋಲಿನಲ್ಲಿ ಧೂಳಿನ ಕಣಗಳು ಮಿನುಗುತ್ತಾ ತೇಲಾಡುತ್ತಿರುವುದನ್ನು ಕಾಣುತ್ತೇವೆ, ಅಂದರೆ ಆ ಧೂಳಿನ ಕಣಗಳು ಬೆಳಕನ್ನು ಚದುರಿಸುತ್ತವೆ ಎಂದಾಯಿತು ಹಾಗೆ ಚದುರಿದ ಬೆಳಕು ನಮ್ಮ ಕಣ್ಣನ್ನು ತಲುಪುವುದರಿಂದ ಕಣಗಳು ನಮಗೆ ಕಾಣಿಸುತ್ತವೆ. ನಮ್ಮ ವಾತಾವರಣದಲ್ಲಿ ಧೂಳಿನ ಕಣಗಳು ಸೂಕ್ಷ್ಮಾತಿಸೂಕ್ಷ್ಮ ಆಮ್ಲಜನಕ, ಸಾರಜನಕದ ಕಣಗಳು ಸೂರ್ಯನ ಕಿರಣವನ್ನು ಚದುರಿಸಬಲ್ಲವು ಸೂರ್ಯನ ಬಿಳಿ ಬಣ್ಣ ನೀಲಿಯಿಂದ ಕೆಂಪಿನವರೆಗೆ ಏಳು ಬಣ್ಣಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುತ್ತದೆ ಅದರಲ್ಲಿನ ನೀಲಿ ಹಾಗೂ ನೇರಳೆ ಬಣ್ಣಗಳನ್ನು ಧೂಳಿನ ಕಣಗಳು ಹೆಚ್ಚಾಗಿ ಚದುರಿಸುತ್ತವೆ, ಕಿತ್ತಳೆ ಹಾಗೂ ಕೆಂಪು ಬಣ್ಣಗಳನ್ನು ಕಡಿಮೆ ಚದುರಿಸುತ್ತವೆ, ನೀಲಿ ಬಣ್ಣ ಹೆಚ್ಚು ಚದುರುವುದರಿಂದ ಆಕಾಶ ನೀಲಿಯಾಗಿ ಕಾಣುತ್ತದೆ. ಬೆಳಕು ಹೆಚ್ಚಾಗಿ ಚದುರಲಿ ಅಥವ ಕಡಿಮೆ ಚದುರಲಿ ಈ ಎರಡೂ ಸಂದರ್ಭಗಳಲ್ಲಿ ಚದುರಿದ ಬೆಳಕಿನ ಬಣ್ಣ ಬದಲಾಯಿಸುವುದಿಲ್ಲ ಚದುರಿ ಬಂದ ಬೆಳಕು ಅದೇ ಬಣ್ಣದ್ದಾಗಿರುತ್ತದೆ ಈ ಬಗೆಯ ಚದುರುವಿಕೆಯನ್ನು ಬ್ರಿಟಿಷ್ ವಿಜ್ಞಾನಿ ರ್‍ಯಾಲೆ ಕಂಡು ಹಿಡಿದ ಅದಕ್ಕಾಗಿ ಇದಕ್ಕೆ ರ್‍ಯಾಲೆ ಚದುರಿಕೆ (ರ್‍ಯಾಲೆ ಎಫೆಕ್ಟ್) ಎಂದು ಹೆಸರು.

ಅನಿಲದ ಅಥವ ದ್ರಾವಣದ ಅಣುಗಳ ಮೇಲೆ ಬೀಳುವ ಬೆಳಕಿನ ಬಹುಭಾಗ ರ್‍ಯಾಲೆ ಚದುರಿಕೆಗೆ ಒಳಗಾಗುವುದಾದರೂ ಅದರ ಸ್ವಲ್ಪ ಭಾಗ ಮಾತ್ರ ಬೇರೊಂದು ಬಗೆಯ ಚದುರಿಕೆಗೆ ಒಳಗಾಗುತ್ತದೆ ಆಗ ಚದುರಿದ ಬೆಳಕು ಬಣ್ಣವನ್ನು ಬದಲಾಯಿಸುತ್ತದೆ ಆ ಬೆಳಕು ಮಸುಕಾಗಿರುವುದರಿಂದ ಕಾಣಿಸುವುದಿಲ್ಲ. ಅದಕ್ಕೆ ತಕ್ಕ ಸಲಕರಣೆಗಳನ್ನು ತಯಾರಿಸಿ ಮೊದಲ ಬಾರಿಗೆ ೧೯೨೮ರಲ್ಲಿ ರಾಮನ್ ತೋರಿಸಿದರು ಈ ಬಗೆಯ ಚದುರುವಿಕೆಗೆ ರಾಮನ್ ಚದುರಿಕೆ ಚದುರಿಕೆಯ ಪರಿಣಾಮವಾಗಿ ಬಣ್ಣ ಬದಲಾಯಿಸುವುದಕ್ಕೆ ರಾಮನ್ ಪರಿಣಾಮ(ರಾಮನ್ ಎಫೆಕ್ಟ್) ಎಂದು ಹೆಸರು ಬಂತು. ಈ ಸಂಶೋಧನೆ ಬೆಳಕಿನ ಕಿರಣಗಳ ಚಲನೆಗೆ ಕ್ರಿಶ್ಚಿಯನ್ ಹೈಗೆನ್ಸ್, ನ್ಯೂಟನ್ ಮತ್ತು ಮ್ಯಾಕ್ಸ್ ಫ್ಲಾಂಕರ ನಡುವೆ ತಿಕ್ಕಾಟ ನಡೆಯುತ್ತಿದ್ದಾಗ ಸಹಾಯಕ್ಕೆ ಬಂದಿತು. ಅದೇನೆಂದರೆ ಬೆಳಕಿನ ಕಿರಣ ಎಂಬುದು ಕಣಗಳು ವೇಗವಾಗಿ ಚಲಿಸುತ್ತಿರುವ ಪ್ರವಾಹ ಎಂದು ನ್ಯೂಟನ್ ಅಭಿಪ್ರಾಯ ಪಟ್ಟ ಆದರೆ ಆತನ ಸಮಕಾಲೀನ ವಿಜ್ಞಾನಿ  ಹೈಗೆನ್ಸ್ ಬೆಳಕು ಅಲೆರೂಪದ ಪ್ರವಾಹ ಎಂದ ಬಹು ಕಾಲ ಕಣ ಮತ್ತು ಅಲೆ ಸಿದ್ಧಾಂತಗಳ ನಡುವೆ ಸಂಘರ್ಷ ಏರ್ಪಟ್ಟು ೧೯ನೇ ಶತಮಾನದಂಚಿನ ವೇಳೆಗೆ ವಿಜ್ಞಾನಿಗಳು ಹೈಗೆನ್ಸ್‌ನ ಅಭಿಪ್ರಾಯವನ್ನು ಎತ್ತಿ ಹಿಡಿದರು. 

ಒಂದು ಕೊಳಕ್ಕೆ ಕಲ್ಲೆಸೆದರೆ ಅಲೆಗಳು ಉಂಟಾಗಿ ಚಲಿಸಲಾರಂಬಿಸುತ್ತದೆ. ಆ ಚಲನಾ ಹಾದಿಗೆ ಏನಾದರು ಅಡ್ಡ ಬಂದರೆ ಆ ಅಡಚಣೆಯ ಎರಡೂ ಬದಿಗಳಲ್ಲಿ ಅಲೆ ಬಾಗಿ ಮುಂದುವರೆಯುವುದನ್ನು ನೋಡಬಹುದು ಹಾಗೆಯೇ ಶಬ್ದದ ಅಲೆಗಳೂ ಕೂಡ ಅಡಚಣೆಯ ಅಂಚಿನಲ್ಲಿ ಬಾಗಿ ಮುಂದುವರೆಯುವುದರಿಂದ ಗೋಡೆ ಆಚೆ ಮಾತನಾಡುವವರ ಧ್ವನಿ ನಮಗೆ ಕೇಳಿಸುವುದು. ಬೆಳಕೂ ಕೂಡ ಈ ಮಾದರಿಯ ಲಕ್ಷಣವನ್ನು ಪ್ರಯೋಗ ಮಾಡಿದಾಗ ತೋರಿ ಬಂದದ್ದರಿಂದ ಅಲೆ ಸಿದ್ಧಾಂತಕ್ಕೆ ಮನ್ನಣೆ ನೀಡಿದರು. 

ಆದರೆ ಜರ್ಮನ್ ಭೌತವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಈ ಎರೆಡೂ ಸಿದ್ಧಾಂತಗಳು ಸರಿ ಆದರೆ ಪೂರ್ಣ ಸತ್ಯವಲ್ಲ ಎಂದು ಅಭಿಪ್ರಾಯ ಪಟ್ಟರು. ಸೂರ್ಯನಿಂದ ಶಕ್ತಿ ಶಾಖ ಹಾಗೂ ಬೆಳಕಿನ ರೂಪದಲ್ಲಿ ಹೊರಸೂಸುತ್ತದೆ ಆದರೆ ಈ ಶಕ್ತಿ ಅವಿಚ್ಛಿನ್ನವಾಗಿ ಹೊರಸೂಸದೆ ಬಿಡಿ ಬಿಡಿಯಾದ ಪೊಟ್ಟಣಗಳಾಗಿ (ಬೆಂಕಿ ಪೊಟ್ಟಣದ ಬಂಡಲಿನಿಂದ ಬೆಂಕಿ ಪೊಟ್ಟಣಗಳು ಹೊರತೆಗೆದಂತೆ) ಹೊರಸೂಸುವುದೆಂದು ಪ್ರಾಯೋಗಿಕಾವಾಗಿ ತಿಳಿಸಿದರು ಶಕ್ತಿಯ ಅಂತಹ ಪೊಟ್ಟಣಗಳಿಗೆ ಕ್ವಾಂಟಮ್ ಎಂದು ಕರೆದರು. ಆದರೆ ಈ ಸಿದ್ದಾಂತವನ್ನು ಸಾಬೀತುಮಾಡಲು ಪರದಾಡುತ್ತಿದ್ದಾಗ ರಾಮನ್ ಪರಿಣಾಮ ಸಹಾಯಕ್ಕೆ ಬಂತು. ಅಲೆ ರೂಪದ ಬೆಳಕು ಕ್ವಾಂಟಮ್ ರೂಪದಲ್ಲಿ ಬರಲು ಬೆಳಕಿನ ರಶ್ಮಿ ಅಣುಗಳ ಮೇಲೆ ಚದುರಿದಾಗ ಬಣ್ಣ ಬದಲಾಯಿಸುವದೇ ಕಾರಣ ಎಂದು ಬಯಲಾಯಿತು.

ಈ ಮೂರೂ ಸಿದ್ಧಾಂತಗಳು ಒಂದಕ್ಕೊಂದು ಪೂರಕ ಎಂದು ತೀರ್ಮಾನಿಸಿ ಅಂತಿಮವಾಗಿ ಕ್ವಾಂಟಮ್ ಸಿದ್ಧಾಂತ ಬೆಳಕು ಕಂಡು ಭೌತ ಪ್ರಪಂಚಕ್ಕೆ ಕ್ರಾಂತಿಕಾರಿ ತಿರುವು ಕೊಡಲು ರಾಮನ್ ಪರಿಣಾಮ ಮಹತ್ತರ ಪಾತ್ರವಹಿಸಿತು.

ರಾಮನ್ನರ ಸಂಶೋಧನೆ ಪ್ರಕಟಗೊಂಡ ಹತ್ತು ವರ್ಷಗಳಲ್ಲಿ ರಾಮನ್ನರ ಪರಿಣಾಮದ ಮೇಲೆ ಎರಡು ಸಾವಿರ ಸಂಶೋಧನೆಗಳು ಪ್ರಕಟಗೊಂಡವು ರಾಮನ್ ಗತಿಸುವ ವೇಳೆಗೆ ಆ ಸಂಖ್ಯೆ ಸಹಜವಾಗಿಯೇ ಹತ್ತು ಸಾವಿರ ದಾಟಿತ್ತು. ವಿಜ್ಞಾನ ಕ್ಷೇತ್ರಕ್ಕೆ ವಿಜ್ಞಾನಿಯೊಬ್ಬನ ಕೊಡುಗೆಯ ವಿಷಯ ಬಂದಾಗ ಆತನ ಸಂಶೋಧನೆ ಸೋದರ ವಿಜ್ಞಾನಿಗಳ ಮೇಲೆ ಹಾಗೂ ಪ್ರಪಂಚದ ಒಟ್ಟು ವಿಜ್ಞಾನದ ಬೆಳವಣಿಗೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿರುತ್ತದೆ ಎನ್ನುವುದಾಗಿರುತ್ತದೆ ಈ ದಿಸೆಯಲ್ಲಿ ರಾಮನ್ನರ ಕೊಡುಗೆ ರಾಮನ್ ಪರಿಣಾಮದಷ್ಟೇ ದೊಡ್ಡದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು