ನೋ ಪಾರ್ಕಿಂಗ್ ಓಕೆ "ಪಾರ್ಕಿಂಗ್" ಬೋರ್ಡ್ ಇಲ್ಲ ಯಾಕೆ...?

 ನೋ ಪಾರ್ಕಿಂಗ್ ಓಕೆ "ಪಾರ್ಕಿಂಗ್" ಬೋರ್ಡ್ ಇಲ್ಲ ಯಾಕೆ...?

- ಚಲಂ ಹಾಡ್ಲಹಳ್ಳಿ 

ಹಾಸನ ಜಿಲ್ಲಾ ಪೋಲಿಸ್ ಹಾಸನ ನಗರದ ಟ್ರಾಫಿಕ್ ವಿಚಾರವಾಗಿ ತೀವ್ರವಾದ ತೀರ್ಮಾನ ತೆಗೆದುಕೊಂಡಿದೆ. ನಾಳೆಯಿಂದ ಅಂದರೆ ಜುಲೈ ೧೫ ರಿಂದ ಮುಲಾಜಿಲ್ಲದೇ ಸಂಚಾರಿ ನಿಯಮ ಪಾಲಿಸದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಅಂದಿದ್ದಾರೆ.
ವಾಹನ ದಟ್ಟಣೆ ಹೆಚ್ಚಾದಂತೆ ಅವುಗಳಿಂದ ಸಂಭವಿಸುವ ಅವಘಡಗಳನ್ನು ತಡೆಯುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ಬಹಳ ಪ್ರಚಾರ ಮಾಡಿ ಕಾರ್ಯೋನ್ಮುಖರಾಗಿರುವ ಹಾಸನ ಜಿಲ್ಲಾ ಪೋಲಿಸ್ ಅಭಿನಂದನೆಗೆ ಅರ್ಹ.
ಹೆಲ್ಮೆಟ್ ವಿಚಾರವಾಗಿ, ಅತಿವೇಗದ ವಿಚಾರವಾಗಿ, ವೀಲಿಂಗ್ ಪುಂಡರ ವಿಚಾರವಾಗಿ, ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸುವ ವಿಚಾರವಾಗಿ, ಇನ್ಸೂರೆನ್ಸ್ ಇಲ್ಲದ ವಿಚಾರವಾಗಿ ಎಲ್ಲಾ ಪೋಲಿಸ್ ಪ್ರಕಟ ಮಾಡಿರುವ ವಿಚಾರ ಸರಿಯಾಗಿಯೇ ಇದೆ.
ಆದರೆ ಪಾರ್ಕಿಂಗ್ ವಿಚಾರವಾಗಿ ತೆಗೆದುಕೊಂಡ ತೀರ್ಮಾನಕ್ಕೆ ಸಾರ್ವಜನಿಕರಲ್ಲಿ ಒಪ್ಪಿಗೆ ಇದ್ದಂತಿಲ್ಲ.
ಪಾರ್ಕಿಂಗ್ ಮಾಡಲು ಜಾಗವೇ ಇಲ್ಲದಿದ್ದ ಮೇಲೆ ನೋ ಪಾರ್ಕಿಂಗ್ ದಂಡ ವಿದಿಸುವುದು ಯಾವ ನ್ಯಾಯ ಅಂತ ಜನ ಕೇಳುವ ಪ್ರಶ್ನೆಯನ್ನು ಪೋಲಿಸ್ ನಿರ್ಲ್ಯಕ್ಷ ಮಾಡಬಾರದು.
ವಾಹನ ಹೆಚ್ಚಾದಂತೆ ಅವುಗಳು ಓಡುವಂತೆ ನಿಲ್ಲಲು ಸಹ ಜಾಗ ಮಾಡಿಕೊಡುವುದು ಬಹಳ ಮುಖ್ಯವಾದ ವಿಚಾರ. ಅದನ್ನು ಮಾಡದೇ ಕೇವಲ ದಂಡ ವಿಧಿಸುತ್ತೇವೆ ಅಂದರೆ ಪೋಲಿಸ್ ತನ್ನ ಕಾರ್ಯವ್ಯಾಪ್ತಿಯ ದುರುಪಯೋಗ ಮಾಡಿಕೊಳ್ಳುತ್ತಿದೆ ಅನ್ನದೇ ಬೇರೆ ಏನು ಹೇಳಲು ಸಾಧ್ಯ...?
ಹಲವು ಸಂಘಸಂಸ್ಥೆಗಳನ್ನು ಕರೆದು ಮಾತನಾಡಿಸಿ "ನೋ ಪಾರ್ಕಿಂಗ್" ಬೋರ್ಡ್ ದಾನ ಮಾಡುವಂತೆ ಕೇಳಿರುವ ಪೋಲಿಸ್ ಅದೇ ಸಂಘ ಸಂಸ್ಥೆಗಳಿಗೆ "ಪಾರ್ಕಿಂಗ್" ಬೋರ್ಡ್ ಕೂಎ ಕೇಳಿದ್ದರೆ ಅದಕ್ಕೊಂದು ತೂಕ ಹಾಗು ಸರಿಯಾದ ನ್ಯಾಯವಾದರೂ ಸಿಗುತ್ತಿತ್ತು.
ಪಾರ್ಕಿಂಗ್ ವಿಚಾರದಲ್ಲಿ ತನ್ನ ನಿಲುವನ್ನು ಹಾಗೇ ಉಳಿಸಿಕೊಂಡು ಪೊಲೀಸ್ ಒಂದಷ್ಟು ಸಿದ್ದತೆ ಮಾಡಿಕೊಳ್ಳಬೇಕಾಗಿದೆ.

ಪೋಲಿಸ್ ಇಲಾಖೆ ದಂಡ ಕಟ್ಟಿದ ಉದಾಹರಣೆಗಳಿವೆ...

ನೋ ಪಾರ್ಕಿಂಗ್ ಅಂತ ದಂಡ ಹಾಕಿದ್ದಕ್ಕೆ ಹಲವು ಕಡೆ ನ್ಯಾಯಾಲಯದಲ್ಲಿ ಪೋಲಿಸ್ ಇಲಾಖೆಯೇ ದಂಡ ಕಟ್ಟಿದ ಉದಾಹರಣೆಗಳಿವೆ.
ಸೂಕ್ತ ಜಾಗ ಒದಗಿಸದೇ, ಸೂಕ್ತ ರೀತಿಯಲ್ಲಿ ವ್ಯವಸ್ಥೆ ಸರಿ ಮಾಡದೇ ಕೇವಲ ದಂಡ ಹಾಕಿದ್ದಕ್ಕೆ ಖುದ್ದು ಇಲಾಖೆಯೇ ಹಲವು ಬಾರಿ ನ್ಯಾಯಾಲಯದಲ್ಲಿ ದಂಡ ಕಟ್ಟಿದೆ.
ತುಂಬಾ ಜನರಿಗೆ ಪೋಲಿಸ್ ಇಲಾಖೆಯ ವರ್ತನೆ ಹಾಗು ಸಂಗತಿ ನಿರ್ವಹಣೆ ಕುರಿತಾಗಿ ಅಸಹನೆ ಇದೆ. ಆದರೆ ಅವರ ವಿರುದ್ದ ಪ್ರಶ್ನೆ ಮಾಡುತ್ತಾ ಕೇಸು, ಕೋರ್ಟ್ ಅಂತ ಹೋಗಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಒತ್ತಡದ ಜೀವನವನ್ನು ಅವರ ಅಸಹಾಯಕತೆ ಅಂತ ತಿಳಿಯಬಾರದು. 
ಎಲ್ಲವನ್ನು ಸಮಷ್ಟಿಯಿಂದ ನೋಡಿ ಕ್ರಮ ಕೈಗೊಂಡರೆ ಅದೇ ಸಾರ್ವಜನಿಕರು ಇಲಾಖೆಯ ಜೊತೆಗೆ ಕೈ ಜೋಡಿಸುತ್ತಾರೆ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ.

ಕೆ ಆರ್ ಪುರಂನಲ್ಲಿ ಪಾರ್ಕಿಂಗ್ ಎಲ್ಲಿದೆ...?

ಕೆ ಆರ್ ಪುರಂ ಜನ ವಸತಿ ಮಾಡಲು ನಿರ್ಮಾಣ ಗೊಂಡ ಪ್ರದೇಶ. ಆ ಕೆ ಆರ್ ಪುರಂನ ಮೊದಲನೇ ಅಡ್ಡರಸ್ತೆಯಿಂದ ಹಿಡಿದು ಮಸಿದೀಯ ಅಂದರೆ ಏಳನೇ ಅಡ್ಡ ರಸ್ತೆಯ ತನಕ ಇರುವ ಖಾಸಗಿ ಆಸ್ಪತ್ರೆಗಳ ಲೆಕ್ಕ ತೆಗೆದುಕೊಳ್ಳಿ.
ಅಲ್ಲಿಗೆ ಬರುವ ಡಾಕ್ಟರ್, ರೋಗಿಗಳು ಹಾಗು ಅವರ ಕಡೆಯ ಜನರು ಬರುವ ವಾಹನಗಳನ್ನು ಎಲ್ಲಿ ಪಾರ್ಕಿಂಗ್ ಮಾಡಬೇಕು?
ಆ ಪಾರ್ಕಿಂಗ್ ಜವಬ್ದಾರಿ ಆಯಾ ಆಸ್ಪತ್ರೆ ಆಡಳಿತವೇ ನೋಡಿಕೊಳ್ಳಬೇಕು ಅಂತಾದರೆ ಅದನ್ನು ಈ ಪೋಲಿಸ್ ಮೊದಲು ಆ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಮಾತನಾಡಬೇಕಲ್ಲವೇ...?
ಪಾರ್ಕಿಂಗ್ ಜಾಗವನ್ನು ಟೌನ್ ಪ್ಲಾನಿಂಗ್ ಅಧಿಕಾರಿಗಳಿಗೆ ತೋರಿಸಿ ಅನುಮತಿ ಪಡೆದು ಅಲ್ಲಿ ವಾಹನ ನಿಲ್ಲಿಸದೇ ಎಕ್ಸ್ ರೇ, ಲ್ಯಾಬ್ ಮುಂತಾದುವನ್ನು ಮಾಡಿಕೊಂಡರೆ ಅದಕ್ಕೆ ಜನಸಾಮಾನ್ಯರು ಯಾಕೆ ದಂಡ ಕಟ್ಟ ಬೇಕು ಹೇಳಿ...?
ಮೊದಲಿಗೆ ಅಲ್ಲಿ ಅಂದರೆ ವಸತಿ ಉದ್ದೇಶಕ್ಕಾಗಿ ಇರುವ ಬಡಾವಣೆಯಲ್ಲಿ ವಾಣಿಜ್ಯ ಉದ್ದೇಶದ ಆಸ್ಪತ್ರೆಗಳನ್ನು ಕಟ್ಟಲು ಅನುಮತಿ ಕೊಟ್ಟಿದ್ದರ ಬಗ್ಗೆ ಮಾತನಾಡಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಮಾತನಾಡಿದರೂ ಹೊಸ ಹೊಸ ಖಾಸಗಿ ಆಸ್ಪತ್ರೆಗಳು ಆಗುತ್ತಲೇ ಇವೆ. ವಾಹನಗಳು ಹೆಚ್ಚಾಗುತ್ತಲೇ ಇವೆ.
ಮೊದಲು ಆ ಆಸ್ಪತ್ರೆ ಹಾಗು ಇತರೆ ವಾಣಿಜ್ಯ ಉದ್ದೇಶದ ಸಂಸ್ಥೆಗಳ ಜೊತೆಗೆ ಪೋಲಿಸ್ ಮಾತನಾಡಲಿ. ಪಾರ್ಕಿಂಗ್ ಜಾಗ ನೀಡಲಿ.
ಆ ನಂತರ ಮುಲಾಜಿಲ್ಲದೇ ನೋ ಪಾರ್ಕಿಂಗ್ ಶುಲ್ಕ ವಿಧಿಸಲಿ. ಹಾಸನ ಪೋಲಿಸ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿ.

ಜನಪ್ರತಿನಿಧಿಗಳು ಇತ್ತ ಗಮನ ಹರಿಸಲಿ

ಕಾನೂನನ್ನು ಪಾಲಿಸುವ ಜವಬ್ದಾರಿ ನಾಗರಿಕರದ್ದಾಗಿರುತ್ತದೆ. ಆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಜಿಲ್ಲಾಡಳಿತದ ಜವಬ್ದಾರಿಯಾಗಿರುತ್ತದೆ. ಆ ಕಾನೂನನ್ನು ಪಾಲಿಸುವುದಕ್ಕೆ ಸಮಂಜಸವಾದ ರೂಪುರೇಷಡಗಳನ್ನು ನಿರ್ಧರಿಸುವುದು, ಆ ರೂಪುರೇಷಡಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವುದು, ಪಾಲಿಸುವುದಕ್ಕೆ ವ್ಯವಸ್ತಿತವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಕಾನೂನನ್ನು ಜಾರಿ ಮಾಡುವ ಸರಿಯಾದ ವಿಧಾನವಾಗಿದೆ.
ಪೋಲಿಸ್ ಅಧೀಕಾರಿಗಳು ಆಡಳಿತ ನಡೆಸುವ ಸಮಯದಲ್ಲಿ ಪರ್ಯಾಯವಾದ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸದೇ ಕಾನೂನನ್ನು ಜಾರಿಗೊಳಿಸುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದು ಜನಪ್ರನಿಧಿಗಳ ಕರ್ತ್ಯವ್ಯವಾಗಿರುತ್ತದೆ. ಜನಪ್ರತಿನಿದಿಗಳೇ ಸಾರ್ವಜನಿಕರು ಹಾಗು ಇಲಾಖೆಯ ನಡುವೆ ಮಾತನಾಡಿ ಸಮನ್ವಯ ಕಾರ್ಯ ಮಾಡುವುದು ಬಹಳ ಮುಖ್ಯವಾದ ಕೆಲಸ. ಯಾವುದೇ ಕಾನೂನನ್ನು ಸಾರ್ವಜನಿಕರಿಗೆ ಪಾಲಿಸಲು ಸಾಧ್ಯವಾಗುತ್ತಿಲ್ಲವಾದರೆ ಆ ಕಾನೂನನ್ನು ಪುನರ್ ವಿಮರ್ಶಿಸಬೇಕಾಗುತ್ತದೆ.

ಯಧುನಂದನ್, ಹೆಚ್. ಸನ್ನದು ಲೆಕ್ಕ ಪರಿಶೋಧಕರು

ಫುಡ್ ಕೋರ್ಟ್ ಮತ್ತು ಪಾರ್ಕಿಂಗ್ ಅದ್ವಾನ

ಈ ಹಿಂದೆ ಶಾಸಕರಾಗಿದ್ದ ಪ್ರೀತಮ್ ಗೌಡರು ಬಹಳ ಮಹತ್ವಾಕಾಂಕ್ಷೆಯಿಂದ ಹಾಸನ ನಗರದ ಹಲವೆಡೆ ಫುಡ್ ಕೋರ್ಟ್‌ಗಳನ್ನು ನಿರ್ಮಾಣ ಮಾಡಿದರು.
ಎಂ ಜಿ ರಸ್ತೆಯ ಸತ್ಯಂಮಗಲ ಪಂಚಾಯ್ತಿ ವ್ಯಾಪ್ತಿಯ ಜಾಗದಲ್ಲಿ ಉದ್ದಕ್ಕೂ ನಾನಾ ರೀತಿಯ ಊಟ, ತಿಂಡಿಯ ಅಂಗಡಿಗಳಿವೆ.
ಸಂಜೆ ಆಯಿತೆಂದರೆ ಅಲ್ಲಿ ಸಂತೆಯೇ ನೆರೆದಿರುತ್ತದೆ. ಆ ಸಂತೆಗೆ ಬರುವ ಜನ ನಡೆದುಕೊಂಡು ಬಂದು ಹೋಗುತ್ತಾರಾ...?
ಫುಡ್ ಕೋರ್ಟ್‌ಗೆ ಬರುವ ಜನ ಎಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು...? 
ಸದ್ಯಕ್ಕಂತೂ ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಆಗುತ್ತಿದೆ.
ಎಂಜಿ ರಸ್ತೆ, ಸಹ್ಯಾದ್ರಿ ಎದುರಿನ ಸಾಲಗಾಮೆ ರಸ್ತೆ, ಪೃಥ್ವಿ ಥಿಯೇಟರ್ ಬಳಿ ಹೀಗೆ ಹಲವು ಕಡೆ ಇರುವ ಫುಡ್ ಕೋರ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಎಲ್ಲಿದೆ...?
ಇಲ್ಲಿ "ಪಾರ್ಕಿಂಗ್" ಬೋರ್ಡ್ ಹಾಕಿ ಆ ನಂತರ ನೋ ಪಾರ್ಕಿಂಗ್ ಕ್ರಮ ಕೈಗೊಳ್ಳದಿದ್ದರೆ ಒಳ್ಳೆಯ ಕ್ರಮ ಅಂತಾಗುವುದಿಲ್ಲ.

ಪಾರ್ಕಿಂಗ್‌ಗೆ ಜಾಗ ಮೀಸಲಿಡಬೇಕು

ಸಂಚಾರಿ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಬಹಳ ಮುಖ್ಯ. ಪೋಲಿಸ್ ಮುಖ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಿರುವುದು ಸ್ವಾಗತಾರ್ಹವಾಗಿದೆ. ಆ ನಿಟ್ಟಿನಲ್ಲಿ ಎಸ್ ಪಿ ಸಲೀಂ ಅವರು ಇದ್ದಾಗ ಸಾಕಷ್ಟು ಸುಧಾರಣೆ ಕೆಲಸಗಳಾಗಿದ್ದವು. ಆ ನಂತರದ ದಿನಗಳಲ್ಲಿ ಮತ್ತದೇ ಅವ್ಯವಸ್ಥೆ ಮುಂದುವರೆದಿತ್ತು.
ನಗರದ ಸಂತೇಪೇಟೆಯಲ್ಲಿ ವಾಹನ ಸಂಚಾರ ಹೆಚ್ಚಿರುವಾಗಲೇ ಲಾರಿಗಳನ್ನು ಅಡ್ಡ ನಿಲ್ಲಿಸಿಕೊಂಡು ಲೋಡ್ ಅನ್ ಲೋಡ್ ಮಾಡುವುದು ಸರ್ವೇ ಸಾಮಾನ್ಯ ದೃಶ್ಯವಾಗಿದೆ. ಅಂತಹವರಿಗೆ ಲೋಡ್ ಅನ್ ಲೋಡ್ ಮಾಡಲು ವಾಹನ ದಟ್ಟಣೆ ಇಲ್ಲದ ಸಮಯ ನಿಗದಿ ಮಾಡಿದರೆ ಅನುಕೂಲವಾಗುತ್ತದೆ. 
ರಸ್ತೆಯುದ್ದಕ್ಕೂ ಮೂರು ಲೈನ್‌ಗಳಲ್ಲಿ ಪಾರ್ಕಿಂಗ್ ಮಾಡಿರುವುದು ಕಾಣುತ್ತದೆ. ವಾಹನ ದಟ್ಟಣೆ ಹೆಚ್ಚಾದ ನಂತರ ಪಾರ್ಕಿಂಗ್ ಜಾಗ ಮೀಸಲಿಡುವುದು ಹಾಗು ಅದರ ನಿರ್ವಹಣೆ ಕಡೆಗೆ ಗಮನ ಕೊಡುವುದು ಸೂಕ್ತ.

ಬಾನು ಮುಷ್ತಾಕ್, ಸಾಹಿತಿ, ಚಿಂತಕರು

ಹಾಸನದಲ್ಲಿ ಎಲ್ಲೆಲ್ಲಿ ಪಾರ್ಕಿಂಗ್ ಇದೆ...?

ಹಾಗೆ ನೋಡಿದರೆ ಹಾಸನ ನಗರದಲ್ಲಿ ಪಾರ್ಕಿಂಗ್ ಅಂತ ಸೂಕ್ತ ಜಾಗಗಳೇ ಇಲ್ಲ. ಸಿಟಿ ಬಸ್ ಸ್ಟಾಂಡ್ ಸೆಲ್ಲರ್‌ನಲ್ಲಿ ಒಂದು ಪಾರ್ಕಿಂಗ್ ಇದೆ. ದೇವಿಗೆರೆ ಮಾರುಕಟ್ಟೆ ಇದ್ದ ಜಾಗದಲ್ಲಿ ಒಂದು ಪಾರ್ಕಿಂಗ್ ಜಾಗವಿದೆ. ಅದು ಬಿಟ್ಟರೆ ಸೂಕ್ತ ಪಾರ್ಕಿಂಗ್ ಅಂತ ಬೋರ್ಡು ನಿಲ್ಲಿಸಿರುವುದು ಕಾಣಿಸುವುದಿಲ್ಲ.
ಪೋಲಿಸ್ ಇಲಾಖೆ ತನ್ನ ಕೆಲಸದ ವ್ಯಾಪ್ತಿ ಇಷ್ಟೇ ಅಂತ ದಂಡ ಹಾಕುತ್ತಾ ಲಾ ಅಂಡ್ ಆರ್ಡರ್ ಪಾಲಿಸ್ತಾ ಇದೀವಿ ಅಂದ್ರೆ ಅದು ಸೂಕ್ತ ಕ್ರಮವಲ್ಲ.
ಹೇಗಿದ್ದರೂ ಒಳ್ಳೆಯ ಕೆಲಸಕ್ಕೆ ಪೋಲಿಸ್ ಇಲಾಖೆ ಒಳ್ಳೆಯ ಕೆಲಸಕ್ಕೆ ಕೈ ಹಾಕಿದೆ. ಇದೇ ಸಮಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡದೇ ಇರುವ ಆಸ್ಪತ್ರೆ, ಶಾಲಾ ಕಾಲೇಜುಗಳು ಇನ್ನಿತರೆ ಸಂಗಸಂಸ್ಥೆಗಳ ಸಭೆ ಕರೆದು ಅವರಲ್ಲಿಗೆ ಬರುವ ಸಾರ್ವಜನಿಕರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರಾ ಇಲ್ಲವಾ ಅಂತ ಒಮ್ಮೆ ಕೇಳಿ ಮುಂದುವರೆಯುವುದು ಒಳ್ಳೆಯ ಕೆಲಸಕ್ಕೆ ನಾಂದಿ ಹಾಡಿದಂತಾಗುತ್ತದೆ. ಜನರ ವಿಶ್ವಾಸವನ್ನು ಗಳಿಸಿದಂತಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು