ಸಮೃದ್ದ, ಗಾಡ ಜೀವನಾನುಭವ, ಅಪರೂಪದ ಶಕ್ತಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್...

ಸಮೃದ್ದ, ಗಾಡ ಜೀವನಾನುಭವ, ಅಪರೂಪದ ಶಕ್ತಿಯ 

ಸಾಹಿತಿ ಹಾಡ್ಲಹಳ್ಳಿ ನಾಗರಾಜ್...


ಹಾಡ್ಲಹಳ್ಳಿ ನಾಗರಾಜ್... ನಮ್ಮ ಕಾಲಮಾನದ ಓರ್ವ ಮಹತ್ವದ ಲೇಖಕ. ಯಾವ ಸ್ಥಾನಮಾನದ ಬೆನ್ನು ಹತ್ತದೇ ತನ್ನದೇ ಶೈಲಿಯ ಸಾಹಿತ್ಯ ಕೃಷಿಯನ್ನು ಮಾಡಿಕೊಂಡು ಬಂದು ಇದೂವರೆಗೂ ಸಮೃದ್ದ, ಗಾಡ ಜೀವನಾನುಭವದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು.

೭೦ ರ ದಶಕದಲ್ಲಿ ಕುತೂಹಲದ ಕಣ್ಣುಗಳಿಂದ ಅಕ್ಷರಗಳ ಕಡೆಗೆ ನೋಡುತ್ತಾ ಬೆಳೆದ ಈ ವಿಜ್ಞಾನದ ವಿಧ್ಯಾರ್ಥಿ ಕನ್ನಡದ ಜೀವನ ವ್ಯಾಕರಣಗಳ ಜೊತೆ ಒಡನಾಡಿ ಅವುಗಳ ಜೊತೆಗೆ ತಾವೂ ಬೆಳೆದ ಪರಿ ಅಚ್ಚರಿ ಮೂಡಿಸುವಂತದು.

ಇಂದಿಗೆ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರಿಗೆ ೭೧ ರ ಸಮೃದ್ಧ ವಸಂತಗಳು. ಇವಿಷ್ಟೂ ಬೇರೆ ಬೇರೆ ಋತುಗಳನ್ನು ವಸಂತವನ್ನಾಗಿಸಿಕೊಳ್ಳುವ ಅಪರೂಪದ ಶಕ್ತಿ ಇರುವ ಕಾರಣಕ್ಕಾಗಿ ಇವರ ಹುಟ್ಟಿದ ವರ್ಷವನ್ನು ವಸಂತದ ಋತುವಿನ ಲೆಕ್ಕದಲ್ಲಿ ಹೇಳುವುದು ಹೆಚ್ಚು ಸೂಕ್ತ.

ಇಂದಿಗೂ ಅವರ ಒಡನಾಟ ಮಾಡಿದವರಿಗೆ ವಸಂತದ ನವಚಿಗುರಿನ ನವೋಲ್ಲಾಸದ ಲೇಪನ ಆಗದಿರದು. ಈ ಸಮಯಕ್ಕೆ ಸಂವೇದನಾಶೀಲ ಕವಿ ಸುಬ್ಬು ಹೊಲೆಯಾರ್ ಅವರ ವಿಶೇಷ ಲೇಖನ ನಿಮ್ಮ ಓದಿಗಾಗಿ....


ಹಾಡ್ಲಹಳ್ಳಿ ನಾಗರಾಜ್ ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಇವರು ಈಗಾಗಲೇ ಕಥೆ,ಕಾದಂಬರಿ,ನಾಟಕ ಹಾಗೂ ಲೇಖನಗಳ ಮುಖೇನ ನಮ್ಮೆಲ್ಲರಿಗೂ ಚಿರಪರಿಚಿತರು. ಯಾವತ್ತೂ ಜನಪ್ರಿಯತೆ ಗಾಗಿ ಹಾತೊರೆದವರಲ್ಲ. ಪ್ರಶಸ್ತಿ ಸಮಾರಂಭಗಳಿಂದ ದೂರ, ನಿಜವಾಗಿಯೂ ಎಲೆ ಮರೆಯ ಕಾಯಿಯ ಹಾಗೆ ಬರವಣಿಗೆಯಲ್ಲಿ ಹಣ್ಣಾದವರು. ಅರ್ಥಾತ್ ಮಾಗಿದ ಮನಸ್ಸು, ಬಾಳ ಪಕ್ವತೆ ಹೊಂದಿದ ಕನ್ನಡದ ಹೆಸರಾಂತ ಲೇಖಕರಲ್ಲಿ ನಾಗರಾಜ್ ಕೂಡ ಒಬ್ಬರು. 
ಮಾಗಿದ ಮನಸ್ಸು ಅಂತ ಹೇಳಿದೆ,ಹೌದು ಮಾಗಿದ ಮನಸ್ಸು, ತೂಗಿದ ತೆನೆಯಾದವರು.ಇಷ್ಟು ಹೇಳುವುದಕ್ಕೆ ಕಾರಣ, ಜಗತ್ತನ್ನು ಯಾರು ಕೇಳಿಸಿಕೊಳ್ಳುತ್ತಾರೊ ಅವರಿಗೆ ಆ ಜಗತ್ತಿನ ಬಗ್ಗೆ ಹೇಳುವುದಕ್ಕೆ ಸಾಧ್ಯವಿರುತ್ತದೆ, ಹಾಗಾಗಿ ಜಗತ್ತನ್ನು ನೋಡುವ ಕ್ರಮದಲ್ಲಿ ನಾಗರಾಜು ಬಹಳ ಧ್ಯಾನಸ್ಥ ಸ್ಥಿತಿಯಿಂದ ಕೇಳಿಸಿಕೊಂಡಿದ್ದಾರೆ. ಪ್ರಕೃತಿಯನ್ನು ಕೇಳಿಕೊಳ್ಳುವುದರಲ್ಲಿನ ಸುಖ ಅದನ್ನು ನೋಡುವುದರಲ್ಲಿ ಇಲ್ಲ ಎನ್ನಬಹುದು. ಒಬ್ಬ ಲೇಖಕನಿಗೆ ಸಹನೆ ಇರಬೇಕು, ಅದು ಪ್ರಕೃತಿಯ ಸಹನೆ, ಅಥವಾ ತಾಯಿಯ ಸಹನೆ , ಇದೇ ಅಂತಿಮ.
     'ಹಾಡ್ಲಹಳ್ಳಿ ನಾಗರಾಜ್' ಅವರ ಹೊಸ ಕೃತಿ ಯಾದ "ಮಳೆಯೆಂಬ ಮಾಯಾಂಗನೆ" ಯ ಲೇಖನಗಳನ್ನು ಓದುತ್ತಾ ಓದುತ್ತಾ ನಾನು ಪ್ರಕೃತಿಯನ್ನು ಕೇಳಿಸಿಕೊಳ್ಳುತ್ತಾ ಹೋದೆ, ನನಗೆ ಜಗತ್ತಿನ ಶ್ರೇಷ್ಠ ಲೇಖಕ 'ಮಾರ್ಕವೀಸ್' ನ ಮಳೆಯ ಕುರಿತ ಬಹಳ ಮಹತ್ವದ  ಕಾದಂಬರಿ ನೆನಪಾಯಿತು.
ಕುವೆಂಪು ಕಾದಂಬರಿಯಲ್ಲಿ ಬರುವ ಆ ಕಾಡುಗಳು, ಪಾತ್ರಗಳು, ಸಣ್ಣ ಸಣ್ಣ ವಿಷಯಗಳು ಈ ಲೇಖನ ಸಂಗ್ರಹದಲ್ಲೂ ಮತ್ತೆ ಮತ್ತೆ ನನಗೆ ಕಾಣಿಸಿಕೊಂಡವು. ಅಂಥದ್ದೇ ಗ್ರಾಮೀಣ ಬದುಕು, ಅಂತದ್ದೇ ಮಲೆನಾಡ ಚಿತ್ರಗಳು ಇಲ್ಲಿಕೂಡ ನನಗೆ ನೆನಪಾದವು. ಅದನ್ನು ನಾನು ನೋಡುತ್ತಾ ಕೇಳುತ್ತಾ ಹೋದೆ. ಗ್ರಾಮೀಣ ಪ್ರದೇಶದ ಬದುಕು ಅದರಲ್ಲೂ ಮಲೆನಾಡಿಗರ ಸಣ್ಣಸಣ್ಣ ವಿವರಗಳು,ಅವರ ಬದುಕು ಬವಣೆಗಳನ್ನ ನಾಗರಾಜ್ ಬರಹದಲ್ಲಿ ಬದುಕುತ್ತಾ ಹೋಗುತ್ತಾರೆ.ಹಾಗೆ ನನ್ನಂತವರೆಲ್ಲರೂ ಇವರ ಬರಹಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾ, ನಾವೆಲ್ಲಾ ನಡೆದ ಹಾಗೆ, ನೆಂದ ಹಾಗೆ ಭಾಸವಾಗುತ್ತದೆ. 
ಮಲೆನಾಡಿನ ಭಾಷೆಯ ಅನನ್ಯತೆ ಓದುಗರಿಗೆ ರೋಮಾಂಚನ ಉಂಟು ಮಾಡುತ್ತದೆ. ತುಂಬಾ ಸರಳ ಸಹಜವಾದ ನುಡಿಗಟ್ಟುಗಳು ಕನ್ನಡ ಸಾಹಿತ್ಯಕ್ಕೆ ಮೆರಗನ್ನು ತಂದಿವೆ ಮತ್ತು ಅದರ ವಿಸ್ತಾರವನ್ನು ಈ ಬರಹಗಳಲ್ಲಿ ಕಾಣಬಹುದು.  ಓದುಗರು ಈ ಲೇಖನಗಳನ್ನು ಓದುತ್ತಾ ಮುದಗೊಳ್ಳುತ್ತಾರೆ. ಸಹಜವಾಗಿ ಮಳೆಯನ್ನ  ನೋಡಿದ ಹಾಗೆಯೇ ಮಳೆಯ ಕುರಿತು ಓದುವಾಗ ಕೂಡ ನಮ್ಮ ಮನಸ್ಸಿನ ಒಳಗೆ ಮಳೆ ಬರುತ್ತಲೇ ಇರುತ್ತದೆ, ಅಂತಹ ಒಂದು ಶಕ್ತಿಯನ್ನ ನಾಗರಾಜ್ ಓದುಗರಿಗೆ ಆಗುಮಾಡಿದ್ದಾರೆ.
ಇದಕ್ಕಾಗಿ ನಿಜಕ್ಕೂ ನಾನು ಅವರಿಗೆ ಅಭಿನಂದಿಸಲೇ ಬೇಕು,ಇಲ್ಲಿ ಮಳೆ ಒಂದು ರೂಪಕ, ಒಂದು ವಾಸ್ತವ, ಅಥವಾ ಇವರು ಹೇಳುವ ಹಾಗೆ ಮಾಯಾಂಗನೆ. ಇವರು ಮಳೆಯನ್ನ ಇಲ್ಲಿ ಮಾಯಾಂಗನೆ ಎಂದಿದ್ದಾರೆ. ಹಾಗೆ ಅವರು ಹೇಳುವಾಗ, ನನಗೆ ಮೊದಲ ಮಳೆಗೆ ಹದಿಹರೆಯದ ಹೆಣ್ಣುಮಗಳು ಆಸೆಯಿಂದ ಮಳೆಯಲ್ಲಿ ನೆನೆದು ತನ್ನ ತಾಯಿಯ ಮುಂದೆ ಖುಷಿಯಾಗುವ ವರೆಗೂ 'ನೆಂದೆ ಅಮ್ಮ' ಅಂತ ಹೇಳಿ, ತಾಯಿಯಿಂದ ಬೈಸಿಕೊಳ್ಳುತ್ತಿರುವಾಗ, ಸ್ವತಃ ಆ ತಾಯಿ ತನ್ನ ವಯಸ್ಸಿನಲ್ಲಿ ತಾನು ಹೇಗೆ ಗದ್ದೆಯಿಂದಲೊ, ತೋಟದಿಂದಲೋ,ಇನ್ನೂ ಎಲ್ಲಿಂದಲೋ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಮಳೆಯಲ್ಲಿ ನೆಂದು ಸುಖ ಅನುಭವಿಸಿದ್ದನ್ನು ಹೇಳಿಕೊಳ್ಳದೆ ಒಳಗೇ ಸಂತಸ ಪಡುವ ದೃಶ್ಯ ಕಣ್ಮುಂದೆ ಬಂತು , ಮಳೆಯೆಂಬ ಮಾಯಾಂಗನೆ  ವಾಸ್ತವಗಳನ್ನು ಬಿಚ್ಚಿಡುವ ಇಂತಹ ಅಪರೂಪದ ಕಥನಗಳು ಎನ್ನುವುದು ನನ್ನ ಭಾವನೆ.
ನಾಗರಾಜ್ ಶ್ರಮ ಸಂಸ್ಕೃತಿಯಿಂದ ಬಂದವರು, ಕೃಷಿಯ ಕಷ್ಟವನ್ನು,ಪ್ರಕೃತಿಯ ಸಂಪತ್ತಿನ ಸುಖವನ್ನು ಅನುಭವಿಸಿದವರು, ಇದು ಅಲ್ಲಿ ಹುಟ್ಟಿ ಬೆಳೆದವರೆಲ್ಲರ ಅನುಭವವೂ ಕೂಡ ಹೌದು.ಇವರು ಹಾಡ್ಲಹಳ್ಳಿಯೆಂಬ ಪುಟ್ಟ ಗೂಡಿನಿಂದ ಹಾರಿಬಂದ ಹಕ್ಕಿಯಂತೆ ಕಾಣಿಸುತ್ತಾರೆ. ತನ್ನ ವೃತ್ತಿಯ ಕಾರಣಕ್ಕೆ ಎಲ್ಲೆಲ್ಲೋ ತಿರುಗಾಡಿದರೂ, ಅವರ ನೆನಪುಗಳು ಮಾತ್ರ ತನ್ನ ಗೂಡಿನತ್ತಲೇ ಹಾರುತ್ತವೆ, ಇಲ್ಲಿ ಮಲೆನಾಡನ್ನು ಕಟ್ಟುವಾಗ ಕಣ್ಣು ಹಾಯಿಸಿದಷ್ಟೂ ಹಸಿರೇ ಚಲಿಸುತ್ತಿರುವಂತೆ ಕಾಣುತ್ತದೆ. ಅಲ್ಲಿಯ ಬೆಟ್ಟಗುಡ್ಡಗಳು, ಕಣಿವೆಗಳು, ಜಲಪಾತಗಳು, ಮನುಷ್ಯನಿಗೆ ಇದಕ್ಕಿಂತ ಶ್ರೀಮಂತಿಕೆ ಬೇಕಾ, ಎನ್ನುವ ಖುಷಿ ಇದೆ. ಇದು ದೂರದಲ್ಲಿ ನಿಂತು ನೋಡಿದರೆ ಹಾಗನಿಸುತ್ತದೆ. ಆದರೆ ಕಣ್ಣ ಕೆಳಗೆ ಮಾಡಿ ನೋಡಿದರೆ ಪಾದದ ನೋವೆಷ್ಟು ಎಂದು ತಿಳಿಯುತ್ತದೆ. ನಾಗರಾಜ್ ಪಾದಕ್ಕೆ ಆದ ನೋವನ್ನು ಹೇಳುತ್ತಲೇ ಕಣ್ಣಿಗೆ ಕಂಡ ಹಸಿರು ಖುಷಿಯನ್ನು ಹೇಳಿದ್ದಾರೆ. ಇದು ಇವರ ಕೃತಿಯ ಬಹಳ ದೊಡ್ಡ ಹೆಗ್ಗಳಿಕೆ. 
ಕೃತಿಯ ಬಗ್ಗೆ ನಾನೊಬ್ಬ ಓದುಗನಾಗಿ ಹೇಳುವುದಾದರೆ ಈ ಕೃತಿಯಲ್ಲಿ ಒಂದು ಆಕಸ್ಮಿಕ ಸಾವು,  ಜೀವ ಉಳಿಸಿದ ತಾಯಿ, ಹೆಣ್ಣು ಮಕ್ಕಳು ನೋಡುವ ರೋಮಾಂಚನ, ಮಗ ಬರದಿದ್ದಾಗ ತಲ್ಲಣ, ಒಂದು ಕೃತಿ, ಓದುಗ ಮತ್ತು ಲೇಖಕರ ನಡುವೆ ಮಳೆ ಸುರಿಯುವ ಸೇತುವೆಯಾಗಿ ಒಳಗೊಳ್ಳುವುದರಲ್ಲಿ ಆ ಕೃತಿಯ ಯಶಸ್ಸು ಇದೆ ಅನ್ನವುದನ್ನ ನಾಗರಾಜ್ ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ,ಅದು ಅವರ ಬಹುದೊಡ್ಡ ಕೊಡುಗೆ ಅನ್ನೋದು ನನ್ನ ನಂಬಿಕೆ. ಅವರ ಬರವಣಿಗೆಯ ಬಹಳ ದೊಡ್ಡ ಕೊಡುಗೆ ಎಂಬುದು ನನ್ನ ನಂಬಿಕೆ.
ಆಕಾಶಕ್ಕೂಮೋಡಕ್ಕೂ, ಮಳೆಗೂ ಭೂಮಿಯೊಂದಿಗೆ ಇರುವಂತೆ ಅನಾದಿ ಕಾಲದಿಂದಲೂ ಮಳೆಹನಿಗೂ ಕಣ್ಣೀರಿಗೂ ನೇರ ಸಂಬಂಧವಿದೆ.ಈ ಎರಡು ಹನಿಗಳನ್ನ ನಾಗರಾಜ್ ತಮ್ಮ ಲೇಖನಗಳಲ್ಲಿ ವರವಿನಂತೆ ಬಳಸಿದ್ದಾರೆ. ಅಥವಾ ಅದು ಮನುಶ್ಯನಾಳದ ದುಃಖದ ಸ್ಥಾಯಿಯಾಗಿ ಅಭಿವ್ಯಕ್ತಗೊಂಡಿದೆ.ವರವು ಎಂದರೆ ಹೆಚ್ಚು ಮಳೆಯಾದ ಕಡೆ ಭೂಮಿ ನೀರೇ ಸಹಜವಾಗಿ ಉಕ್ಕುತ್ತದೆ. ಇದನ್ನ ಅವರು ಲೇಖನಗಳಲ್ಲಿಯೂ ಬಳಸಿದ್ದಾರೆ. ಅದು ನಾನು ಈ ಲೇಖನಗಳನ್ನು ಓದುವಾಗ ಆ ವರವು ಎನ್ನುವ ನೆನಪುಗಳು ನನ್ನನ್ನು ಕಾಡಿಸಿದವು. 
ಆ ನೀರು ಎಲ್ಲಿ ಉಕ್ಕುತ್ತದೆ ಎನ್ನುವುದು ತಿಳಿಯುವುದಿಲ್ಲ. ಬಹುಶಃ ಕೊಡಗಿನಲ್ಲಿ ಕಾವೇರಿ ಉದ್ಬವ ಆಂತ ಹೇಳ್ತಾರಲ್ಲಾ ಅಂತದ್ದೆಲ್ಲಾ ಮಲೆನಾಡಿನಲ್ಲಿ ಅಲ್ಲಲ್ಲಿ ನೀರಿನ ಬುಗ್ಗೆ ನಮಗೆ ಕಾಣಿಸುತ್ತವೆ. ಹಾಗೆ ಮಳೆಯ ಬಗ್ಗೆ ಬರೆಯುವಾಗ ತಮ್ಮ ಖಾಸಗಿ ಬದುಕನ್ನ ಈ ವರವು ಉಕ್ಕುತ್ತದಲ್ಲ ಹಾಗೆ ತನ್ನ ಬರವಣಿಗೆಯಲ್ಲೇ ತಲ್ಲೀನರಾಗಿ ಬರೆದ ಈ ಲೇಖನಗಳು ತೋಯಿಸುತ್ತಲೇ ಇರುತ್ತವೆ. ಇದರಲ್ಲಿ ಇರುವ ೧೩ ಲೇಖನಗಳು ಓದುಗರಿಗೆ ಖಂಡಿತಾ ಇಷ್ಟವಾಗುತ್ತವೆ. ನಾನಂತೂ ಮತ್ತೆ ಮತ್ತೆ ನಾನೇ ಆಡುವ ಭಾಷೆ, ಸಾಹಿತ್ಯದಲ್ಲಿ ಓದುಗರಾಗಿ ಒಂದು ರೀತಿಯ ಕಚಕುಳಿ ಕೊಡುವಂತಹ ಶಬ್ದಗಳು, ಮಾತು, ಈ ಮಾತು ಶಬ್ದಗಳಿರುವ ಮಾತು. 
ಈ ೩೦ ವರ್ಷಗಳಲ್ಲಿ ಎಂತಹ ಅದ್ಬುತ ಶಬ್ದಗಳನ್ನು ಮರೆತೇ ಬಿಟ್ಟಿದ್ದೆನಲ್ಲ ಎಂದು ನನ್ನ ಬಗ್ಗೆ ಬೇಸರವೂ ನಾಗರಾಜ್ ಬಗ್ಗೆ ಹೆಮ್ಮೆ ಮತ್ತು ಅಭಿಮಾನವೂ ಉಂಟಾಯಿತು. ನನಗೆ ಇದರಲ್ಲಿ ತುಂಬಾ ಕಾಡಿಸಿದ ಎರಡ್ಮೂರು ಲೇಖನಗಳು ಇವೆ. ('ಹೊಂತಲುವಿನಲ್ಲಿ ಕೊಚ್ಚಿಹೋದ ಕೂಸು', 'ಮಳೆಯಲ್ಲಿ ಮನೆಯ ಮಗ', 'ರಣಚಂಡಿ ಅವತಾರ', 'ಸಾವಿನ ಮನೆಯ ಸರಸ')ಅಂತಾ ಈ ಮೂರ್ನಾಲ್ಕು ಲೇಖನಗಳು ನನ್ನನ್ನ ತುಂಬಾ ಕಾಡಿಸಿವೆ,  ನನ್ನದೆ ಕವಿತೆಯ ಸಾಲು 
'ನನ್ನ ಕೊಚ್ಚಿಕೊಂಡು ಹೋಗುವ ಮಳೆ ಬರಲಿಲ್ಲ' ಎನ್ನುವ ಮಾತು, ನಾನು ನನ್ನ ಈ ಸಮಾಜದಲ್ಲಿರುವ ಅಸಮಾನತೆಯ ಕುರಿತು ಈ ಮಳೆಯನ್ನ ನಮ್ಮನ್ನೆಲ್ಲಾ ಕೊಚ್ಚಿಕೊಂಡು ಹೋಗ್ಲಿ ಎನ್ನುವ ಹತಾಶೆಯಿಂದ ಹೇಳಿದ ಸಾಲುಗಳು, ಅಥವಾ ನನ್ನ ಸಿಟ್ಟಿನಿಂದ ಬಂದ ಸಾಲುಗಳನ್ನ ಈ ಮಳೆ ಕುರಿತು ನಾನು ಬರೆದಿದ್ದೇನೆ.
ಆದರೆ ಕೊಚ್ಚಿಹೋದ ಕೂಸಿನ ಕುರಿತು ಅವರು ಬರೀತಾ ತನ್ನದೇ ಆದ ಒಂದು ಘಟನೆಯನ್ನು ಅವರು ನೆನಪಿಸುತ್ತಾರೆ. 
ಕೊಚ್ಚಿಹೋದ ಕೂಸನ್ನ,ಬಲು ಹರಸಾಹಸದಿಂದ ತಾಯಿ ತನ್ನ ಮಕ್ಕಳನ್ನು ಉಳಿಸಿಕೊಳ್ಳುವ ಪರಿ ಓದಿದಾಗ ಇದಕ್ಕಿಂತ ಜಗತ್ತಿನಲ್ಲಿ ಯಾವ ಯುದ್ದವೂ ಕಾಣಿಸಲಿಲ್ಲ. ಇದು ತಾಯಿಂದ ಮಾತ್ರ ಸಾದ್ಯ. ಈ ಪ್ರಸಂಗವನ್ನ ಈ ಘಟನೆಯನ್ನ ಓದಿದಾಗ ನನಗೆ ಅವರಿಗೊಂದು ದೊಡ್ಡ ಸಲ್ಯೂಟ್ ಹೊಡೆಯಬೇಕೆನಿಸಿತು.
ಈ ಘಟನೆ ಅಥವಾ ಪ್ರಸಂಗವನ್ನ ಯುದ್ದೋಪಾದಿತಯಲ್ಲಿ ಕಣ್ಣಿಗೆ ಕಟ್ಟುವಂತೆ, ತಾಯಿ ಮಗನಿಗೆ ಹೇಳಿದಂತೆ, ಹಟ್ಟಿಯಲ್ಲಿ ಕೂತು ತಾಯಿ ಮಾತನಾಡಿದಂತೆ ಕೇಳಿಸುತ್ತಾರೆ. ಬಹುಶಃ ಇದನ್ನ ಬರಹಕ್ಕೆ ಇಳಿಸುವಾಗ ಬೇಕಾಗುವ ಸಹನೆ, ಅದರ ಆಧ್ಯಾತ್ಮಿಕತೆ, ಅದರ ಅನನ್ಯತೆ ನಿಜಕ್ಕೂ ಇದೊಂದು ಅಪರೂಪದ ಬರಹ ಅಂತ ನನಗೆ ಅನಿಸಿತು. ಈ ಲೇಖನದಿಂದಾಗಿಯೇ ನನಗೆ ಹಾಡ್ಲಹಳ್ಳಿ ನಾಗರಾಜ್ ಕನ್ನಡದ ಬಹಳ ಮಹತ್ವದ ಲೇಖಕ ಅಂತ ಅನಿಸಿತು. ಯಾಕೆ ಕೆಲವೇ ಬರಹಗಳು  ಲೋಕಕ್ಕೆ ಮುಖ್ಯ  ಅನಿಸುತ್ತವೋ ಆ ಘಟನೆಗಳು ಎಲ್ಲರ ನೆನಪಿನಲ್ಲಿ ಬಂದು ಹೋಗುತ್ತವೆ. 
ಬಹುಶಃ ಕನ್ನಡದಲ್ಲಿ ಬಹಳ ಅತ್ಯಂತ ಕಡಿಮೆ ಬರೆದ ಲೇಖಕ ದೇವನೂರು ಮಹಾದೇವ ಬೇರೆ ಬೇರೆ ಕಾರಣಕ್ಕೆ ಬಹಳ ಮುಖ್ಯವಾಗುತ್ತಾರೆ. ನನಗೆ ಹಾಡ್ಲಹಳ್ಳಿ ನಾಗರಾಜ್ ಇಂತಹ ಅಪರೂಪದ ಘಟನೆಯನ್ನ ಅದನ್ನು ಬರೆಯುವ ಶಕ್ತಿ ಬಹಳದೊಡ್ಡದು ಅನ್ನಿಸುತ್ತದೆ. ಅದಕ್ಕೆ ಬೇಕಾದ ಒಂದು ಧ್ಯಾನ ಶೀಲತೆ ಇರುತ್ತದ್ದಲ್ಲ ಅದು ಬಹಳ ದೊಡ್ಡದು. ತಾಯಿಯಿಂದ ಕೇಳಿಸಿಕೊಂಡು ತಾನು ತಾಯಿಯಾಗುವ, ತನ್ನೊಳಗೇ ತಾಯಿ ಮಗುವಾಗಿ ಮಾತನಾಡುವ ಹಾಗೆ ಈ ಲೇಖನ ಒಡಮೂಡಿದೆ.
ಆ ಘಟನೆಯನ್ನು ಓದಿ ಯಾರಾದರೂ ತಮ್ಮ ಕಣ್ಣಲ್ಲಿ ಒಂದು ಹನಿ ತುಂಬಿಕೊಳ್ಳದಿದ್ದರೆ ಅವರು ಮನುಷ್ಯರೇ ಅಲ್ವೇನೊ ಅನ್ನೋ ಹಾಗೆ ಅಷ್ಟೋಂದು ಕಾಡಿಸುವ ಲೇಖನ ಅದು. ಅದೊಂದು ಹೋರಾಟದ ಕಲ್ಪನೆಯನ್ನು ತಂದುಕೊಡುತ್ತದೆ. ಕೆಲವೇ ಕ್ಷಣದಲ್ಲಿ ದುಮ್ಮುಕ್ಕುವ ನೀರಿನೊಟ್ಟಿಗೆ ನನಗೆ ಈ ಘಟನೆಯನ್ನ ನೆನಪು ಮಾಡಿಕೊಂಡಾಗ ಇನ್ನೊಂದು ಘಟನೆ ನೆನಪಾಗುತ್ತದೆ,'ಬ್ರೆಕ್ಟ್' ಒಂದು ಮಾತು ಹೇಳುತ್ತಾರೆ ನೀರು ಅತ್ಯಂತ ಕಠಿಣವಾದ್ದು, ಮತ್ತು ಮೃದುವಾದದ್ದು, ನನಗೆ ಅತ್ಯಂತ ಬಾಯಾರಿಕೆಯಾದಾಗ ನೀರನ್ನು ಕುಡಿದು ತಣಿಸಿಕೊಳ್ಳುತ್ತೇವೆ. ನೀರು ಮನುಷ್ಯನ ಜೀವನಕ್ಕೆ ಎಲ್ಲದಕ್ಕೂ ಬೇಕಾಗುತ್ತದೆ, ಪ್ರತಿಯೊಂದಕ್ಕೂ ಬೇಕಾಗುತ್ತದೆ. ಆದರೆ ಅದೇ ನೀರು ನನ್ನನ್ನು ಇನ್ನೆಲ್ಲೋ ಸೆಳೆದುಕೊಂಡು ಹೋಗುತ್ತದೆ ಎಂದು ಆದಾಗ ಆಗುವ ಭಯ, ಆತಂಕ, ತಲ್ಲಣ, ಒಂದು ಕೊನೆ ಉಸಿರಿನಲ್ಲೂ ಬದುಕುವ ಪ್ರಯತ್ನ ಇದೆಯಲ್ಲಾ ಈ ಘಟನೆಯನ್ನು ನೆನೆದಾಗ ನನಗೆ ಬ್ರೆಕ್ಟ್‌ನ ಆ ಮಾತು ನೆನಪಾಗುತ್ತದೆ.
ನೀರು ಅತ್ಯಂತ ಮೃದುವಾದದ್ದು, ಮತ್ತು ಕಠಿಣವಾದ್ದು,ಅಂದಾಗ ನಾವು ನೀರನ್ನು ಕುಡಿಯುವುದಕ್ಕೆ, ಸ್ನಾನ ಮಾಡುವುದಕ್ಕೆ ಬಳಸುವಾಗ ಅತ್ಯಂತ ಮೃದುವಾಗಿ ಕಾಣಿಸುತ್ತದೆ. ಅದೇ ನೀರು ನಮ್ಮನ್ನು ಕೊಚ್ಚಿಕೊಂಡು ಹೋಗುವಾಗ ತುಂಬಾ ಕಠಿಣ ಅನಿಸುತ್ತದೆ. ಈ ಪ್ರಸಂಗದ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಅದೊಂದು ಯುದ್ಧ,ಅದೊಂದು ಹೋರಾಟ, ಅದು ಜೀವ ಉಳಿಸುವ ಪ್ರಯತ್ನ ಇನ್ನೂ ಅನೇಕ ಎಲ್ಲಾ ಸಂಗತಿಗಳು ನೆನಪಾಗುತ್ತವೆ. ತಾಯಿಯ ಹಂಬಲ, ಕ್ಷಣಮಾತ್ರದಲ್ಲಿ ತನ್ನ ಕಂದ ಕೈಜಾರಿಹೋಗುತ್ತೋ ಎನ್ನುವ ಆ ಕ್ಷಣಗಳ ನೋವು ಆ ತಾಯಿಗೆ ಮಾತ್ರ ಸಾದ್ಯ, 
ನಮ್ಮ ಅಕ್ಕಮಹಾದೇವಿ ಹೇಳಿದ ಹಾಗೆ 'ನೊಂದ ನೋವ ನೋಯದವರೆತ್ತ ಬಲ್ಲರೋ' ಎಂಬಂತೆ ಬಹುಶಃ ಆ ನೋವು ಆ ಕ್ಷಣವನ್ನು ಅನುಭವಿಸಿದ ಆ ತಾಯಿಗೆ ಮಾತ್ರ ಗೊತ್ತು ಅನ್ನೋದನ್ನು ಈ ಪ್ರಸಂಗವನ್ನ ವಿಶಿಷ್ಟ ಸಂವೇದನೆ ರೀತಿಯಲ್ಲಿ ಹಾಡ್ಲಹಳ್ಳಿ ನಾಗರಾಜರವರು ದಾಖಲಿಸಿದ್ದಾರೆ. ಹೇಳಿದ್ದಾರೆ, ಕಟ್ಟಿಕೊಟ್ಟಿದ್ದಾರೆ. ಎಂದರೂ ತಪ್ಪಾಗಲಾರದು. 
ಮಳೆ ಒಂದು ವರವೂ ಹೌದು, ಶಾಪವೂ ಹೌದು, ಅಂತ ನನಗೆ ಅನೇಕ ಸಲ ಅನಿಸಿದೆ ಆದರೆ ಅದನ್ನ ಮಳೆಯನ್ನ ಮಳೆಯ ಹಾಗೆ ನೋಡ್ಬೇಕು, ಅದೊಂದು ಸಂತೋಷದ ಘಳಿಗೆಯೂ ಹೌದು, ನೋಡದೆ ಒಂದು ಚಂದ ಮಳೆಯನ್ನ ಅದನ್ನು ನೋಡಿ ಅನುಭವಿಸಬೇಕು. ಅದು ಮನುಷ್ಯರಿಗೆ ಅಥವಾ ಈ ನೆಲಕ್ಕೆ ಈ ಭೂಮಿಗೆ  ಖಂಡಿತ ಅಗತ್ಯವಿದೆ. ಎಂದು ಹೇಳ್ತಾ ಈ ಕುರಿತು ಎರಡ್ಮೂರು ಸಾಲುಗಳೇ ಸಾಕು ನೀವು ಕನ್ನಡದ ಬಹುದೊಡ್ಡ ಲೇಖಕ ಎನ್ನುವುದನ್ನು ಸಾಬೀತುಮಾಡುತ್ತವೆ, ಬರಹಕ್ಕೆ ಇರುವ ಶಕ್ತಿಯೇ ಬಹಳ ದೊಡ್ಡದು. ನನಗೆ ಚಿನ್ನದ ಹೊಳಪು ಹೆಚ್ಚಾ ಕರಿಮಣಿ ಹೊಳಪು ಹೆಚ್ಚಾ ಎಂದು ಕೇಳಿದರೆ ಕರಿಮಣಿಯಿಂದಾಗಿ ಚಿನ್ನದ ಹೊಳಪು ಹೆಚ್ಚು ಎಂದು ಹೇಳುವವನು. ಅಲ್ಲಿಗೆ ನನ್ನ ಆಯ್ಕೆ ಕರಿಮಣಿ. ಹಾಗಾಗಿ ಈ ಪುಸ್ತಕದ  ಸಂಗ್ರಹದಲ್ಲಿ ಇಂತಹ ಅಪರೂಪದ ಕರಿಮಣಿಯ ಕನ್ನಡದ ಸಾಲುಗಳನ್ನ ಕೊಟ್ಟ ಹಾಡ್ಲಹಳ್ಳಿ ನಾಗರಾಜುಗೆ  ಮತ್ತೊಮ್ಮೆ ಅಭಿನಂದನೆ ಹೇಳ್ತಾ ಕನ್ನಡದ ಸಾರಸ್ವತ ಲೋಕವನ್ನ ನೀವು ಇಂತ ಅಪರೂಪದ ಬರಹಗಳಿಂದ ಇನ್ನಷ್ಟು ಶ್ರೀಮಂತಗೊಳಿಸಿದ್ದೀರಿ ಅಂತ ನಾನು ಹೇಳ್ತೀನಿ. 
ಇನ್ನೂ ಮಳೆಯಲ್ಲಿ ಮನೆಯ ಮಗ ಎನ್ನುವ ಕಥನ ಓದುವಾಗ ನನಗೆ ಇಬ್ಬರ ಹೆಸರು ನೆನಪಾಗುತ್ತದೆ, ಒಂದು ನಮ್ಮ ಸಾವಿತ್ರಿ ಬಾಯಿ ಪುಲೆ, ಮತ್ತು ಇನ್ನೊಂದು ಬಾಬಾ ಸಾಹೇಬ್ ಅಂಬೇಡ್ಕರ್, ಬಹುಶಃ ಅನಾದಿ ಕಾಲದಿಂದಲೂ ೨ ಸಮುದಾಯಗಳು ಬಹಳ ನೋವನ್ನ ಅನುಭವಿಸಿದಾವೆ, ಶೋಷಣೆಯನ್ನ ಅನುಭವಿಸಿದ್ದಾವೆ, ಅವೆಂದರೆ ಮಹಿಳೆ ಮತ್ತು ದಲಿತರು,  ಆ ಎರಡು ಹೆಸರುಗಳೇ ಯಾಕೆ ನೆನಪಾಗುತ್ತವೆ ಎಂದರೆ ಪುಲೆ ಒಬ್ಬ ಪುರುಷನಾಗಿ ಮಹಿಳೆಗೆ ಇರುವ ಶಕ್ತಿಯನ್ನ ತನ್ನ ಪತ್ನಿಯಿಂದ ಈ ಲೋಕಕ್ಕೆ ಪರಿಚಯ ಮಾಡಿಕೊಟ್ಟರು. ಆಕೆಗೆ ಮಾತ್ರ ಜ್ಞಾನವನ್ನು ಹಂಚುವ ಬಹಳದೊಡ್ಡ ಮಮಕಾರವಿದೆ, ಆಕೆ ಮನೆಯ ಮೊದಲ ಶಿಕ್ಷಕಿ ಮಾತ್ರವಲ್ಲ, ಈ ಲೋಕದ ಶಿಕ್ಷಕಿ ಕೂಡ ಅನ್ನೋದನ್ನ ಲೋಕಕ್ಕೆ ತಿಳಿಸಿದರು. 
ಇನ್ನೊಂದು ಬಾಬಾ ಸಾಹೇಬರನ್ನು ಈ ಕಥನಕ್ಕೆ ಯಾಕೆ ಸೇರಿಸುತ್ತೇನೆಂದರೆ ಈ ದೇಶದ ಮಹಿಳೆಯಷ್ಟೇ ಅಲ್ಲ ಈ ಲೋಕದ ಮಹಿಳೆಯ ಶಕ್ತಿ ಬಹಳ ದೊಡ್ಡದು ಎಂಬುದರ ಅರಿವು ಬಾಬಾ ಸಾಹೇಬರಿಗೆ ತನ್ನ ತಾಯಿಯಿಂದ ತನ್ನ ಚಿಕ್ಕಮ್ಮನಿಂದ ತನ್ನ ಸುತ್ತಮುತ್ತಲಿನವರಿಂದ ಆದ ಘಟನೆಗಳಿಂದಾಗಿ ಬೇರೆ ಬೇರೆ ಕಾರಣಕ್ಕೆ ತನ್ನ ಮನದಲ್ಲಿ ಹುದುಗಿಸಿಕೊಂಡು ಅದು ಈ ದೇಶಕ್ಕೆ ದೊಡ್ಡ ಮಾರ್ಗವಾಗುವ ಒಂದು ದೊಡ್ಡ ಜೀವವೆಂದರೆ ಅದು ಹೆಣ್ಣು. ಮತ್ತೆ ಮತ್ತೆ ತಮ್ಮ ಬರಹಗಳ ಮೂಲಕ ಅದನ್ನ ಅವರು ತೋರಿಸಿದ್ದಾರೆ ಮತ್ತೆ ಅವರು ಮಹಿಳೆಗೆ ಬಹಳ ದೊಡ್ಡ ಪಾಲು ಸಿಗಬೇಕೆಂದು ಹೋರಾಟ ಮಾಡಿದವರು. ಮಹಿಳೆಗೆ ವೋಟಿಂಗ್ ಹಕ್ಕು ಬೇಕು. ಮಹಿಳೆಗೆ ಆಸ್ತಿ ಹಕ್ಕು ಬೇಕು ಅಂತ ಹೇಳಿ ಅಥವಾ ಈ ತರಹದ ಅನೇಕ  ಕಾನೂನುಗಳನ್ನು ಯಾಕೆ ರೂಪಿಸಿದರು ಎಂದರೆ ನಾಗರಾಜ್ ರವರ ತಾಯಿಯಲ್ಲಿ ಇದ್ದಿರಬಹುದಾದಂತ ಹಂಬಲ ಇದೆಯಲ್ಲಾ ಅದು ನನ್ನ ಮಗ ಅಂತ ಹೇಳುವ ಅಥವಾ ಈ ಜೀವವನ್ನು ಉಳಿಸಿಕೊಳ್ಳುವ ಛಲ ಇರಬಹುದು, ಪ್ರಕೃತಿ ಜೊತೆಗೆ ಹೋರಾಡುವ ಪ್ರಕೃತಿ ಜೊತೆಗೆ ಹೋರಾಡಿ ಮೂರು ಮಕ್ಕಳನ್ನ ಅಥವಾ ಎರಡು ಮಕ್ಕಳನ್ನ ಉಳಿಸಿಕೊಳ್ಳುತ್ತಲೇ ತನ್ನ ಕುಟುಂಬವನ್ನು ಕಾಪಾಡುವ ಶಕ್ತಿ ಈಕೆಯ ಮೇಲಿದೆ. ಎನ್ನುವುದನ್ನು ಬಾಬಾ ಸಾಹೇಬರು ಅರ್ಥ ಮಾಡಿಕೊಂಡಿದ್ದರು.
ಹಾಗಾಗಿ ನನಗೆ  ಮಹಿಳೆಯರ ಬಗ್ಗೆ ಮಾತನಾಡುವಾಗ ಬಾಬಾ ಸಾಹೇಬರು ಮತ್ತು ಸಾವಿತ್ರಿಪುಲೆ ನನಗೆ ನೆನಪಾಗುತ್ತಾರೆ. ಅಂತದೊಂದು ಪಾತ್ರವನ್ನ ಹಾಡ್ಲಹಳ್ಳಿ ನಾಗರಾಜ್ ತನ್ನ ಬರವಣಿಗೆಯಲ್ಲಿ ದಾಖಲಿಸಿರುವುದು  ಆ ಹೆಸರುಗಳನ್ನು ನೆನೆಪಿಸುವುದಕ್ಕೆ ನಾನು ಪ್ರಯತ್ನಿಸಿದ್ದೇನೆ.
ಅಂತಹ ಚೈತನ್ಯ ಅಂತಹ ಶಕ್ತಿ ಮಹಿಳೆಯರಿಗೆ ಇದೆ ಎನ್ನುವುದು ನನ್ನ ನಂಬಿಕೆ. ಕೊಟಗಾನಗಳ್ಳಿ ರಾಮಯ್ಯನವರ ಒಂದು ಮಾತು ನನಗೆ ನೆನಪಾಗುತ್ತದೆ. 'ಇರುವೆಯ ಬಲ ಮತ್ತು ಮಹಿಳೆಯ ಶಕ್ತಿ, ಇದು ಯಾವಾಗಲು ನಮ್ಮ ಕನಸುಗಳಿಗೆ ಜೀವ ಕೊಡುತ್ತೆ' ಎನ್ನುವ ಮಾತು ನನಗೆ ನೆನಪಾಗುತ್ತದೆ.  ಇನ್ನೂ ಎರಡು ಕಥೆಗಳು ಹೀಗಿವೆ, ಈ ಮ್ಯಾಥ್ಯೂ ಕಥೆಯನ್ನು  ಓದಿದಾಗ ಒಂದು ರೀತಿಯ ದುಃಖ ಮಡಗಟ್ಟುತ್ತದೆ.
ಮಳೆ ತಣ್ಣಗೆ ಎರಡು ಜೀವವನ್ನು ಬಲಿ ಪಡೆಯುತ್ತದೆ, ಅದು ಬಲಿ ಪಡೆಯುತ್ತೆ ಅಂತ ಹೇಳುವುದು ನಮ್ಮ ಮನುಷ್ಯರ ಒಳಗಿರುವ ಆರೋಪಗಳು ಅಷ್ಟೇ, ಪ್ರಕೃತಿ ಎಲ್ಲಾ ಜೀವ ಸೃಷ್ಟಿಯ ಸಂಕೇತ, ಒಮ್ಮೆ ಮಳೆ ಬಂದರೆ ಲಕ್ಷಾಂತರ ಕೋಟ್ಯಾಂತರ ಸಸಿಗಳು ಜೀವ ಮೊಳಕೆ ಪಡೆಯುತ್ತವೆ ಈ ಮಣ್ಣಿನಲ್ಲಿ. ಸಾದಾಸೀದಾ ಮಣ್ಣಿನಲ್ಲಿಯೂ ಲಕ್ಷಾಂತರ ಗರಿಕೆ ಹುಲ್ಲುಗಳು ಚಿಗರೊಡೆಯುತ್ತವೆ. ಮರಗಳಿಂದ ಬೀಜ ಬಿದ್ದ ಸ್ಥಳದಲ್ಲಿ ಮೊಳಕೆಯೊಡೆದು ಸಸಿಗಳಾಗುತ್ತವೆ.  ಹಾಗೆ ಮನುಷ್ಯರು ಕೂಡ ಈ ಮಳೆಯಿಂದ ಆನಂದವನ್ನು ಪಡೆಯುತ್ತಾರೆ. ಆಕಸ್ಮಿಕವಾಗಿ ಸಾವನ್ನೂ ಪಡೆಯುತ್ತಾರೆ. ಇಂತಹ ರೂಪದ ಈ ಮ್ಯಾಥ್ಯೂ ಘಟನೆ, ಒಂದು ರೀತಿಯ ದುಃಖವನ್ನೂ ಆ ದುಃಖದ ಮನೆಯಲ್ಲಿ ಸರಸವನ್ನೂ ನೋಡುವ ಘಟನೆ ಇದಾಗಿದೆ.  
ಅಂತಿಮವಾಗಿ ಈ ಮಳೆಯೆಂಬ ಮಾಯಾಂಗನೆ  ಎನ್ನುವೂ ರೂಪಕವೂ, ವಾಸ್ತವವೂ, ನಮ್ಮನ್ನೆಲ್ಲ ಓದಿನಲ್ಲಿ ಮುಳುಗಿಸುವುದರಲ್ಲಿ ಹಾಡ್ಲಹಳ್ಳಿ ನಾಗರಾಜ್ ಯಶಸ್ವಿಯಾಗಿದ್ದಾರೆ. ಬರೀ ಮಾತಲ್ಲ ಈ ಪುಸ್ತವನ್ನು ಓದಿ ಅನುಭವಿಸಬೇಕು. ಹಾಗೆ ಅನುಭವಿಸಿದಾಗ ಮಾತ್ರ ಪುಸ್ತಕದಲ್ಲೂ ಮಳೆ, ಹೊರಗೂ ಮಳೆ, ಒಳಗೂ ಮಳೆ ಅಗುವುದನ್ನು ನಾವು ಅನುಭವಿಸುತ್ತೇವೆ. ನನ್ನ ಪ್ರಕಾರ ಮಳೆಯನ್ನು ನೋಡುವುದು ಎಂದರೆ ಜೀವಂತ ಕ್ಷಣಗಳನ್ನು ಅನುಭವಿಸುವುದು ಎಂದು ನಾನು ಭಾವಿಸುತ್ತೇನೆ. ಅಲ್ಲದೆ ನಿಜವಾದ ಸಂಗೀತ ಕೇಳುವುದು ಎಂದೂ ಭಾವಿಸುತ್ತೇನೆ.
   ನಾನು ಯಾವತ್ತೂ ಹಾಸನ ಜಿಲ್ಲೆಯ ಎಲ್ಲಾ ಸ್ನೇಹಿತರ ಜೊತೆಗೆ ಮತ್ತೆ ಲೇಖಕರೊಂದಿಗೆ ಎಲ್ಲರೊಂದಿಗೂ ಇದ್ದೇನೆ ಎಂದು ಭಾವಿಸುತ್ತೇನೆ.  ಇಷ್ಟು ಮೀರಿ ನಾನು ಮಲೆನಾಡಿನವನು, ಅಲ್ಲಿಯ ಗ್ರಾಮೀಣ ಭಾಷೆಯನ್ನ ಅಲ್ಲಿಯ ಬದುಕನ್ನ ನಾನು ಸಣ್ಣಪುಟ್ಟ ಕವಿತೆಯ ಮೂಲಕ ತರಲು ಪ್ರಯತ್ನಿಸುತ್ತೇನೆ. ಆದರೆ ಈ ಭಾಷೆಯನ್ನ ಈ ಮಳೆಯ ಬದುಕನ್ನು ಓದಿದ ಮೇಲೆ ನನಗೆ ಹೀಗೆ ಬರೆಯುವ ಭರವಸೆ ಮೂಡಿದೆ. ಅಂತದ್ದೊಂದು ಭರವಸೆಯನ್ನು ಕೊಟ್ಟ ನಾಗರಾಜ್‌ರವರಿಗೆ ನಾನು ಧನ್ಯವಾದ ಹೇಳ್ಬೇಕು. ನಾನು ಅವರಿಗೆ ಎರಡು ಬಾರಿ ಧನ್ಯವಾದ ಹೇಳಬೇಕು, ನನಗೆ ಮೊದಲ ಬಾರಿಗೆ ಕವಿತೆಯನ್ನು ಓದಲು ಅವಕಾಶ ಮಾಡಿಕೊಟ್ಟದ್ದಕ್ಕೆ ನಾಗರಾಜುರವರನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅದೂ ಒಂದು ಮಳೆಯ ನೆನಪೇ ಎಂದು ನಾನು ಭಾವಿಸುತ್ತೇನೆ. ಮತ್ತೆ ಈಗ ಈ ಮಳೆಯ ಕುರಿತ ಇದೊಂದು ಅಪರೂಪದ ಪುಸ್ತಕ ನಿಮ್ಮ ಬರವಣಿಗೆ ಹೀಗೇ ನಡೆಯುತ್ತಿರಲಿ, ಮಲೆನಾಡಿನವರು ಬರೀ ಕೃಷಿಯಲ್ಲೇ ಮುಳುಗಿದವರಲ್ಲ, ಅವರಲ್ಲೂ ಪ್ರತಿಭಾವಂತಿಕೆ ಇದೆ. ಕಲಾವಂತಿಕೆ ಇದೆ, ಕಲೆ ಇದೆ. ಅವರೊಳಗೂ ಕವಿ ಇದ್ದಾನೆ, ಕಲಾವಿದ, ಲೇಖಕ, ಕಥೆಗಾರ ಇದ್ದಾನೆ, ಈಗೀಗ ಬಹಳ ಮಂದಿ ಮಲೆನಾಡಿನವರು ಮಲೆನಾಡನ್ನು ಬರೀ ಹಾಸನ ಜಿಲ್ಲೆಯಲ್ಲಿ, ಕರ್ನಾಟಕ ದೇಶದಲ್ಲಿ. ಜಗತ್ತಿನ ಎಲ್ಲಾ ಬೇರೆ ಬೇರೆ ಕಡೆಯಲ್ಲಿ, ಓದಿದ್ದಾರೆ, ಕೆಲಸ ಮಾಡುತ್ತಿದ್ದಾರೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ. ಇನ್ನೂ ಪ್ರಗತಿಯನ್ನು ಸಾಧಿಸಲಿ ಎಂದು ಹೇಳುತ್ತಾ, ನಾಗರಾಜ್ ಹೇಗೆ ಮತ್ತೆ ಹಾಡ್ಲಹಳ್ಳಿ ಎಂಬ ಪುಟ್ಟ ಗೂಡಿನಿಂದ ಹಾರಿಬಂದರೋ, ಮತ್ತೆ ಹಳೆಗೂಡಿನ ನೆನಪುಗಳನ್ನ ಕೆದಕುತ್ತಿರುವ ಹಾಗೆ ನಾವು ನಮ್ಮ ಹುಟ್ಟಿದ ಊರನ್ನ ಹುಟ್ಟಿದ ಮಣ್ಣನ್ನ ಮತ್ತೆ ಮತ್ತೆ ನೆನಪಿಸುತ್ತಲೇ, ಮಳೆಯನ್ನ ಮರೆಯದೆ ಹುಟ್ಟಿದೂರನ್ನೂ ಮರೆಯದೆ  ಹೆಸರಾಗಲಿ.
ನಮ್ಮ ಭಾಗದಿಂದ ನಮ್ಮ ಜಿಲ್ಲೆಯ ಬಹಳ ಹಿರಿಯ ಲೇಖಕರು ನಮ್ಮ ಹಾಡ್ಲಹಳ್ಳಿ ನಾಗರಾಜ್‌ರವರು ಈಗಾಗಲೇ ಅನೇಕ ಕಥೆಗಳನ್ನ ನಾಡಿಗೆ ಸಮರ್ಪಣೆ ಮಾಡಿದ್ದಾರೆ, ಅವರು ಬರೆದದ್ದು ಬಹಳ ದೊಡ್ಡದು. ಹೀಗೇ ಇವರು ನಮ್ಮನ್ನೆಲ್ಲಾ ಮುನ್ನಡೆಸಲಿ ಎಂದು ಹೇಳುತ್ತಾ, ಈ ಬರವಣಿಗೆ ಮಳೆಯ ಹಾಗೆ ನಿಲ್ಲದಿರಲಿ ನಿರಂತರವಾಗಿ ಅದು ಹನಿಯುತ್ತಲೇ ಇರಬೇಕು. ವೃದ್ದಿಯಾಗಿ ಉಕ್ಕುತ್ತಲೇ ಇರಬೇಕು ಎಂಬುದು ನನ್ನ ಆಶಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು