ಸುಲ್ತಾನ್ ಪ್ರತಿಭೆಯ ಹಿಂದೆ "ಮೆಹಬೂಬ್" ಎಂಬ ಅಪ್ಪಟ ತಂದೆ

ವಿಕಲರೆಂದು ಜರಿಯದಿರಿ ಸಕಲವ ಸಾಧಿಸಿ ತೋರುವರು

- ಡಾ. ಶಾಂತ ಅತ್ನಿ

ಮೊನ್ನೆ ಹಾಸನದ  ಕಲಾಭವನದಲ್ಲಿ ವಿಶೇಷ ಚೇತನರಿಗಾಗಿ ಹಾಸನ ಚಾರಿಟಬಲ್ ಟ್ರಸ್ಟ್ ಹರೀಶ್  ಎಂಬುವವರು ವಿಕಲಚೇತನರಲ್ಲಿರುವ ಪ್ರತಿಭೆ  ಅನಾವರಣ ಮಾಡಲು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನ ಏರ್ಪಡಿಸಿದ್ದರು.ಅಲ್ಲಿ ಒಬ್ಬ ಹೊಸ ಪ್ರಾಯದ ಯುವಕ ಒಂದು ವಾಕ್ಯವನ್ನು ಎಲ್ಲಾ ಭಾಷೆಗಳಲ್ಲೂ ಬರೆಯುತ್ತಿದ್ದ ಆದರೆ ಅವನು ಎಲ್ಲರಂತೆ ಇಲ್ಲ ವಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು.ಎಲ್ಲರೂ ಆಶ್ಚರ್ಯಪಟ್ಟರು ಈ ವ್ಯಕ್ತಿ ಯಾರು ಎಂದು ಸಂಶೋಧಿಸಿದಾಗ ತಿಳಿದಿದ್ದು ಇಷ್ಟು. ಮಗುವಿನ ಹೆಸರು ಸುಲ್ತಾನ್ ರಝಾ ಪತ್ರಕರ್ತರು,ಸಮಾಜ ಸೇವಕರು,ಸಹೃದಯರು ಮತ್ತು ಜನಸ್ನೇಹಿಯಾದ ಸಕಲೇಶಪುರದ ಮಲ್ನಾಡ್ ಮೆಹಬೂಬ್ ದಂಪತಿಗಳವರ ಮಗ ಎಂಬುದು.ಅವರ ಕುಟುಂಬಕ್ಕೆ ಎರಡನೆ ಮಗುವಾಗಿ ಜನಿಸಿದ ಇವನಿಗೆ ಹುಟ್ಟಿನಿಂದಲೇ ಕಿವಿ ಕೇಳದಿರುವ ವಿಷಯ ತಿಳಿದಿರಲಿಲ್ಲವಂತೆ,ಮಾತಿನ ವಿಕಲತೆಯೂ ಸೇರಿ  ಬಹುವಿಕಲತೆ ಇರುವುದು ಕೂಡ ಇವರಿಗೆ ಒಂದಷ್ಟು ವರ್ಷಗಳವರೆಗೂ ಗೊತ್ತೇ ಆಗಿಲ್ಲ ಇನ್ನು ಚಿಕ್ಕ ಮಗು ಆಗಿರುವುದರಿಂದ ಬೆಳವಣಿಗೆ ಕಡಿಮೆ ಆಗಿರಬಹುದು ಅಥವಾ ಮುಂದೆ ಸರಿಯಾಗುತ್ತಾನೆ ಎಂಬ ಭರವಸೆಯಲ್ಲಿ ಹಾಗೆ ಇದ್ದರು. ಆದರೆ ಒಂದು ದಿನ ಪ್ರಕೃತಿ ಇವರಿಗೆ ಅವನ ನಿಜ ಪರಿಸ್ಥಿತಿಯನ್ನು  ತೆರೆದಿಟ್ಟಿದೆ.ಇದ್ದಕ್ಕಿದ್ದ ಹಾಗೆ ಜೋರು ಮಳೆ ಗಾಳಿ  ಬಂದಿದೆ ಇದೇ ವಯಸ್ಸಿನ ಇವರ ತಂಗಿ ಮತ್ತು ತಮ್ಮನ  8 ತಿಂಗಳ ಮಕ್ಕಳು  ಗಾಳಿ ಮಳೆಗೆ ಹೆದರಿ  ಅಳು ಅಕ್ರಂದನ ಕುಟುಂಬದವರನ್ನು ಗಮನ ಸೆಳೆಯುತ್ತದೆ ಆದರೆ  ಸುಲ್ತಾನ್ ರಝಾ ಮಾತ್ರ ಅಳುತ್ತಲು ಇಲ್ಲ ಏನು ಪ್ರತಿಕ್ರಿಯೆ ನೀಡಿರುವುದಿಲ್ಲ ತನ್ನಷ್ಟಕ್ಕೆ ತಾನೇ ನಗುವುದು,ಸ್ವಲೀನತೆಯಲ್ಲಿ  ತಲ್ಲಿನನಾಗಿದ್ದಾನೆ.ಇದು ತಂದೆ ತಾಯಿಗೆ ಆಶ್ಚರ್ಯದ  ಜೊತೆಗೆ ಅನುಮಾನ ಬಂದಿದೆ ಈ ಎರಡು ಮಕ್ಕಳು ಅಳುತ್ತಿದ್ದರೆ ಇವನು ಮಾತ್ರ ಯಾಕೆ ಅಳುತ್ತಿಲ್ಲ ಏನೋ ಆಗಿರಬಹುದು ಎಂದು ಕಳವಳ,  ಆತಂಕ ಉಂಟಾಗುತ್ತದೆ. 
ಒಂದು ರೀತಿಯ ಆಶಾ ಭಾವನೆಯಲ್ಲಿದ್ದವರಿಗೆ ಬಲೂನಿಗೆ ಪಿನ್ನು ಚುಚ್ಚಿದಂತಾಗುತ್ತದೆ. ಮಗುವನ್ನು ಕರೆದುಕೊಂಡು ಅಲ್ಲಿ ಇಲ್ಲಿ ಅವರು ಇವರು ಹೇಳಿದ ಆಸ್ಪತ್ರೆಗಳಿಗೆ, ದೇವರು,ದಿಂಡಿರು ಹೀಗೆ ಕರೆದುಕೊಂಡು ಅಲೆದಾಡುತ್ತಾ ರೆ. ಆದರೆ ಎಲ್ಲಿಯೂ ಮಗು ಸರಿಯಾಗುವುದೇ ಇಲ್ಲ.ಈ ಮಗುವಿನ ಚಿಕಿತ್ಸೆಗಾಗಿ  ಅವರ ವಾಸ್ತವ್ಯವನ್ನು ಕೇರಳದ ಕಾಸರಗೂಡಿನಿಂದ ಮೈಸೂರಿಗೆ  ಬದಲಾಯಿಸುತ್ತಾರೆ ಆದರೂ ಅವರು ಮಗುವನ್ನು ತೋರಿಸಲು ಆಯುಷ್ ಎಂಬ ಆಸ್ಪತ್ರೆ ಮೈಸೂರಿನಲ್ಲಿ ಇದೆ ಎಂಬ ಮಾಹಿತಿಯು ಕೂಡ ಅವರಿಗೆ ತಿಳಿದಿರುವುದೇ ಇಲ್ಲ ,ಯಾರು ಕೂಡ ಮಾಹಿತಿ ನೀಡುವುದಿಲ್ಲ.ಮಗನಿಗೆ ಸ್ವಲ್ಪ ವಯಸ್ಸು ಆದಮೇಲೆ ತಿಳಿಯುತ್ತದೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ ಆನಂತರದಲ್ಲಿ ವೈದ್ಯರು ಎಲ್ಲಾ ಚಿಕಿತ್ಸೆಗಳನ್ನು ನಡೆಸಿ ಈ ಮಗುವಿಗೆ ಬುದ್ಧಿಮಾಂದ್ಯತೆ ಇದೆ ಜೊತೆಗೆ ಕಿವಿಯು  ಕೇಳಿಸುವುದಿಲ್ಲ, ಮಾತು ಬರುವುದಿಲ್ಲ ಬಹು ವಿಕಲತೆ ಇದೆ ಎಂದು ತಿಳಿದಾಗ ದಂಪತಿಗಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗುತ್ತದೆ.ಆದರೂ ಹೆದರದೆ ನೋವಾದರೂ,ಬೇಸರವಾದರೂ ಧೈರ್ಯವಾಗಿ, ಆ ಮಗುವನ್ನು ಅವರು ನಮ್ಮ  ಮನೆಗೆ ದೇವರ ವರವೆಂದೆ ಭಾವಿಸುತ್ತಾರೆ ಬಹಳ ಪ್ರೀತಿಯಿಂದ ಕಾಳಜಿಯಿಂದ ಆರೈಕೆ ಮಾಡುತ್ತಾರೆ ಆ ಮಗುವಿಗಾಗಿ ತನ್ನ ಸರ್ವಸ್ವವನ್ನು ತಂದೆ ಮೆಹಬೂಬರು ತ್ಯಾಗ ಮಾಡುತ್ತಾರೆ ಮತ್ತು ಅವರ ಇಡೀ ಜೀವನವನ್ನು ಅವನ ಏಳಿಗೆಗಾಗಿ ಮುಡಿಪಿಡುತ್ತಾರೆ ಬಹುತೇಕ ಎಲ್ಲ ಕುಟುಂಬಗಳಲ್ಲಿಯೂ ವಿಶೇಷ ಚೇತನ ಮಕ್ಕಳು ಹುಟ್ಟಿದಾಗ ಸಾಮಾನ್ಯವಾಗಿ ತಂದೆ ಮನೆಯನ್ನು ತೊರೆದು ಹೋಗುವುದು ಅಥವಾ ಬೇರೊಂದು ವಿವಾಹವಾಗುವುದು ಅಥವಾ ಅವರ ಬದುಕಿನ ನೆಲೆಯನ್ನು ಇನ್ನೆಲ್ಲೋ ಕಂಡುಕೊಳ್ಳುವುದು ಮಾಡಿ ಇಂತಹ ಮಕ್ಕಳು ಇರುವ ಕುಟುಂಬವನ್ನು ಬೀದಿಯಲ್ಲಿ ಬಿಟ್ಟು ಹೋಗುವ ಹಲವಾರು ಕುಟುಂಬಗಳನ್ನು ನಾವು ನೋಡಿದರೆ ಈ ಕುಟುಂಬ ವ್ಯತಿರಿಕ್ತವಾಗಿದೆ. ತಂದೆಯೆ ಮಗುವಿಗೆ ತಾಯಿಯಾಗಿ ಹೆಚ್ಚಿನ ಆದ್ಯತೆ ಕೊಟ್ಟು ಮಗುವಿನ ಲಾಲನೆ, ಪಾಲನೆ, ಉಣಿಸು, ತಿನಿಸು, ಸ್ವಚ್ಛಗೊಳಿಸುವುದು,ಬದುಕಿಗೆ ಸಿದ್ಧಗೊಳಿಸುವುದು ಹೀಗೆ ಪ್ರತಿಯೊಂದಕ್ಕೂ ಜೊತೆಯಾಗಿರುತ್ತಾರೆ.ಬದುಕಿನ ಏರಿಳಿತದಲ್ಲಿ ,ಬದಲಾದ ಕಾಲಘಟ್ಟದಲ್ಲಿ ಹಲವಾರು ಭಾವನೆಗಳಿಗೆ ಸಮಾಧಿಕಟ್ಟಿಕೊಂಡು ಒಳಗೊಳಗೆ ನೋವು ಉಣ್ಣುತ್ತಲೂ ಸದಾ ಹಸನ್ಮುಖಿ ಯಾಗಿ ಬದುಕು ಸಾಗಿಸುವ ಪರಿ ಅನನ್ಯ. ತಮ್ಮ ಮಗನ ಬಗ್ಗೆ ತಂದೆ ಮೆಹಬೂಬ್ ಅವರ ಮಾತುಗಳಲ್ಲೇ ಕೇಳುವುದಾದರೆ ನನ್ನ ಮಗ ನನ್ನ ಸರ್ವಸ್ವ,ಈಗ ಅವನು ಎಷ್ಟೇ ದೊಡ್ಡವನಾದರೂ ನನಗೆ ಅವನು ಕೈ ಗೂಸೆ, ಈಗ ಅವನ
ವಯಸ್ಸು 25 , ಹುಟ್ಟಿನಿಂದ ಬುದ್ಧಿಮಾಂದ್ಯ ಜೊತೆಗೆ ಕಿವಿಯೂ ಕೇಳುವುದಿಲ್ಲ, ಮಾತು ಸಹ ಬರುವುದಿಲ್ಲ, ವಿದ್ಯೆಯನ್ನು ಕಲಿಯುವಷ್ಟು ಬುದ್ಧಿ ಇವನಿಗೆ ಇಲ್ಲ. ಆದರೆ ಮೊಬೈಲ್ ಬಳಸುವುದರಲ್ಲಿ ಎತ್ತಿದ ಕೈ. ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಾನೆ. ಲ್ಯಾಪ್ಟಾಪ್ ನಲ್ಲಿ ಕನ್ನಡ ಇಂಗ್ಲಿಷ್ ಟೈಪ್ ಮಾಡುತ್ತಾನೆ. ಇವನಲ್ಲಿ ಇರುವ ವಿಶೇಷತೆ ಏನೆಂದರೆ ಒಂದು ವಾಕ್ಯವನ್ನು ಅನೇಕ ಭಾಷೆಯಲ್ಲಿ ಬರೆಯುತ್ತಾನೆ. ಕನ್ನಡ, ಇಂಗ್ಲಿಷ್, ಹಿಂದಿ, ಅರಬ್ಬಿ, ಚೈನೀಸ್ ಭಾಷೆಗಳು ಹಾಗೂ ವಿದೇಶಿ ಭಾಷೆಯನ್ನು ಸಹ ಬರೆಯುತ್ತಾ ಹೋಗುತ್ತಾನೆ.
ಬಹು ಭಾಷೆಯಲ್ಲಿ ಬರೆಯುವ ಕಲೆ ಇವನಿಗೆ ಆರನೇ ವಯಸ್ಸಿನಲ್ಲೆ ಸಿದ್ದಿಸಿದೆ. ಇದನ್ನು ಪೋಷಕರಾದ ನಾವು ಕಂಡಿದ್ದೇವೆ.ನನ್ನ ಮಗ 
 ಸುಲ್ತಾನ್  7ನೇ ವಯಸ್ಸಿನವರೆಗೂ  ನೆಲದ ಮೇಲೆ  ಉರುಳಾಡುತ್ತಿದ್ದ, ನಮ್ಮ ಪ್ರೀತಿ ಮತ್ತು ಅಗತ್ಯ  ಚಿಕಿತ್ಸೆಯ ನಂತರ ನಡೆಯುವುದು ಸಾಧ್ಯವಾಯಿತು. ಕೈಗೆ ಸಿಕ್ಕ, ಪುಸ್ತಕ ಪೇಪರು ಇತರೆ ಅಕ್ಷರಗಳನ್ನು ನೋಡುತ್ತಾ ಪೆನ್ನಿನಿಂದ ಭಾಷಾಂತರಿಸಿ ಬರೆಯುತ್ತಾನೆ. ಉದಾಹರಣೆಗೆ ವ್ಯಕ್ತಿಯ, ಪ್ರಾಣಿಯ ವಸ್ತುವಿನ ಹೆಸರು ಇಂಗ್ಲೀಷ್ ಭಾಷೆಯಲ್ಲಿ ಇದ್ದರೆ ಅದರ ಕೆಳಗೆ ಕನ್ನಡ ಹಾಗೂ ಇತರೆ ಭಾಷೆಯಲ್ಲಿ ಬರೆಯುತ್ತಿದ್ದ, ಇದನ್ನು ಕಂಡು  ನಮಗೆ ಆಶ್ಚರ್ಯವಾಗಿತ್ತು. ಇದು ಹೇಗೆ ಸಾಧ್ಯ ಹೀಗೆ ಬರೆಯಲು ಎಂದು ಪರಿಶೀಲಿಸಿದಾಗ. ಮನೆಗೆ ತರುವ ಆಹಾರದ ಪಾಕೆಟ್ಟುಗಳು, ನೋಟುಗಳ ಮೇಲೆ , ಸೌಂದರ್ಯವರ್ಧಕ ಪ್ಯಾಕ್ ಗಳ  ಮೇಲೆ ಬರೆದಿರುವ ಬಹುಭಾಷಾ ಅಕ್ಷರಗಳನ್ನು ಕಣ್ಣಿನಿಂದ ನೋಡಿ ಅವುಗಳನ್ನ ಗ್ರಹಿಸಿ ನಂತರ ಬರೆಯುತ್ತಿದ್ದ. ಇವನು ವಿಶೇಷ ಪ್ರತಿಭೆ ಹಾಗೆ ಮುಂದುವರಿಸಲು
ಇತನನ್ನು ಸಕಲೇಶಪುರ ರೋಟರಿ ವಿಕಲಚೇತನರ ಶಾಲೆಗೆ ದಾಖಲಾಗಿದ್ದರು ಹೆಚ್ಚು  ಹೆಚ್ಚು ವಿದ್ಯಾಭ್ಯಾಸ ಮಾಡಲಿಲ್ಲ. ಅಕ್ಷರ ಬರೆಯುವುದು ಹಾಗೂ ಅಂಕಿಗಳನ್ನು ಬರೆಯುವುದು ಮಾತ್ರ ಕಲಿತಿದ್ದ.ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ  ಈತನಿಗೆ ಮೈಸೂರಿನ ಸ್ನೇಹ ಕಿರಣ್  ವಿಷೇಶ ಚೇತನರ  ಶಾಲೆಗೆ ಸೇರಿಸಲಾಯಿತು. 8 ವರ್ಷಗಳು ಸತತ ಪ್ರಯತ್ನ ಪಟ್ಟರು  ಸಹ ಈತ ಪಾಠ,ಪ್ರವಚನ  ಪ್ರಶ್ನೆಗೆ ಉತ್ತರವನ್ನು ಬರೆಯುವಷ್ಟು ಕಲಿಯಲಿಲ್ಲ. ಆ ಮಟ್ಟದ ವಿದ್ಯಾಭ್ಯಾಸವನ್ನು ಸಹ ಕಲಿಯಲು ಸಾಧ್ಯವಾಗಲಿಲ್ಲ. ಸಂಖ್ಯೆಯನ್ನು ಕೂಡುವುದು ಕಳೆಯುವುದು ಮಾತ್ರ ಕಲಿಯಲು ಸಾಧ್ಯವಾಯಿತು.
ಮುಖ್ಯವಾಗಿ  ನಮಗೆ ಹೊರೆಯಾಗದಂತೆ  ತನ್ನ ದೈನಂದಿನ ಎಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾನೆ ಇದೊಂದು ಅದ್ಭುತವೆ ಸರಿ, ಕಂಪ್ಯೂಟರ್ ನಲ್ಲಿ ಚಿತ್ರ ಬಿಡಿಸುತ್ತಾನೆ. ಸ್ವಲ್ಪ ಮಟ್ಟಿಗೆ ಕೈಗಳಿಗೆ ಮೆಹಂದಿ ಬಿಡಿಸುವ ಕಲೆ ಇವನಿಗೆ ಸಿದ್ದಿಸಿದೆ ಅದರಲ್ಲೆ ಪ್ರೋತ್ಸಾಹಕರವಾಗಿ ವಿಶೇಷ ತರಬೇತಿ ಕೊಡಿಸುವ ತಯಾರಿಯಲ್ಲಿದ್ದೇವೆ ಎಂದು ಹೆಮ್ಮೆಯಿಂದ ನುಡಿದರು.
   ರಝಾ ನಮ್ಮ ಕುಟುಂಬದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ, ನಮ್ಮ ಮನೆಗೆ ಅವನು ವರವಾಗಿ ಬಂದಿದ್ದಾನೆ, ನಮಗೆ  ಪ್ರೀತಿ, ತಾಳ್ಮೆ, ತ್ಯಾಗ,ಕರುಣೆ,ಸಹಾಯ, ಸಹನೆಯನ್ನು ಕಲಿಸಿದ್ದಾನೆ ಅವನು ನಮಗೆ ಸುಲ್ತಾನನೆ ಆಗಿದ್ದಾನೆ.ಬದುಕೆಂದರೆ ಏನು ಎಂಬುದನ್ನು ಮತ್ತು ಅರ್ಥಪೂರ್ಣವಾಗಿ ಬದುಕುವುದು ಹೇಗೆ ಎಂಬುದನ್ನು ತರಬೇತಿ ನೀಡಿದ್ದಾನೆ.ಆದಾಗ್ಯೂ ನೆಂಟರು,ಇಷ್ಟರು ಪಾಪ ಮಾಡಿರುವುದರಿಂದ ಇಂತ ಮಗ ಹುಟ್ಟಿದ್ದಾನೆ ಎಂದು ಆಡಿಕೊಳ್ಳುವಾಗ, ಬೀದಿಯಲ್ಲಿ ಬೇರೆ ಮಕ್ಕಳು ಆಟಕ್ಕೆ ಸೇರಿಸಿಕೊಳ್ಳದೆ ಕಲ್ಲಿನಿಂದ ಹೊಡೆಯುವಾಗ, ವಿಕಲತೆ ಹಿಡಿದು ಕೂಗುವಾಗ ಮನಸ್ಸಿಗೆ ತೆಗೆದುಕೊಳ್ಳಲಾಗದಷ್ಟು ತುಂಬಾ ನೋವಾಗುತ್ತದೆ.ಈ ನೆಲದಲ್ಲಿ ವಿಕಲತೆ ಹೊಂದಿರುವ ಮಕ್ಕಳು, ಕುಟುಂಬದ ನೋವು ಏನು ಎಂಬುದನ್ನು ಅತಿ ಹತ್ತಿರದಿಂದ ನೋಡಿ ಮರುಗಿದ್ದಾರೆ,ಕೊರಗಿದ್ದಾರೆ.ಅವರಿಗಾಗಿ ಏನಾದರೂ ಮಾಡಬೇಕು ಎಂಬ ಆಲೋಚನೆಯಲ್ಲಿ ಇದ್ದಾರೆ.ಬುದ್ದಿಮಾಂಧ್ಯಮಕ್ಕಳಿಗಾಗಿ ಒಂದು ತರಬೇತಿ ಶಾಲೆ ಮತ್ತು ಟ್ರಸ್ಟ್ ತೆರೆಯುವ ಘನವಾದ ಉದ್ದೇಶದಲ್ಲಿ ಇದ್ದಾರೆ ಅವರಿಗೆ ಆಲ್ ದ ಬೆಸ್ಟ್ ಹೇಳೋಣ ಮತ್ತು ಇವರ ಮಗನ ಭವಿಷ್ಯ  ಉಜ್ವಲವಾಗಲಿ ಎಂದು ಹಾರೈಸೋಣ. ಇವರ ಕೆಲಸಕ್ಕೆ ಸಮಾಜ,ಸಮಾನಮನಸ್ಕರು,ಸಮಾಜಸೇವಕರು,ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು, ಮಾಧ್ಯಮಗಳು, ರಾಜಕೀಯ ವ್ಯಕ್ತಿಗಳು,ಆಸಕ್ತರು ಮತ್ತು ಸರ್ಕಾರ, ವಿಕಲಚೇತನ ಕುಟುಂಬದವರು ಇವರೊಂದಿಗೆ ಕೈಜೋಡಿಸಿ ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಹಕರಿಸಬೇಕು ಎಂಬುದು ಇವರ ಮನವಿಯಾಗಿದೆ.

ಡಾ.ಶಾಂತ ಅತ್ನಿ
ತಾಲೂಕು ಸಮನ್ವಯ ಸಂಪನ್ಮೂಲ ತರಬೇತುದಾರರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು