ಬೆಂಗಳೂರಿನಲ್ಲಿ ಕವಿತೆ ಹುಟ್ಟುತ್ತದೆಯೇ...


ಹಾಡ್ಲಹಳ್ಳಿ ಪಬ್ಲಿಕೇಷನ್‌ನಿಂದ ವಿಜಯಶ್ರೀ ಎಂ ಹಾಲಾಡಿ ಅವರ ಎರಡು ಹೊಸ ಕೃತಿ ಜನಾರ್ಪಣೆ ಕಾರ್ಯಕ್ರಮ ಫೆಬ್ರವರಿ 25 ರಂದು ಬೆಂಗಳೂರಿನ ಬೀಟೆಲ್ ಪುಸ್ತಕ ಮಳಿಗೆಯಲ್ಲಿ ನಡೆಯಿತು.
ಕೃತಿ ಬಿಡುಗಡೆಯಲ್ಲಿ ಕೇಳಿ ಬಂದ ಮಾತುಗಳ ಮುಖ್ಯಾಂಶ ಇಲ್ಲಿದೆ

ಗಂಡಸು ಕೂಡ ಪ್ರೀತಿಸಬಲ್ಲ...

ಬೆಂಗಳೂರು ಕವಿತೆಗೆ ಹೇಳಿಮಾಡಿಸಿದ ಜಾಗವಲ್ಲ‌. ಇಲ್ಲಿ ಗುಂಪುಗಾರಿಕೆ ಜಾಸ್ತಿ ಇದೆ. ಹಾಗಿರುವಾಗ ಕವಿತೆ ಹೇಗೆ ಸಾಧ್ಯ?

ಕವಿತೆ ಬರೆಯುವ ಮೂಲಕ ಜಗತ್ತಿನ ಶಾಂತಿಗೆ ಖಂಡಿತವಾಗಿ ಕಾಣ್ಕೆಯಿದೆ.

ಜೋಡಣೆ, ಚಮತ್ಕಾರ ಕಾವ್ಯ ಆಗೋದಿಲ್ಲ. ಜೀವಸಂಚಾರವಿರಬೇಕು. ಕಾವ್ಯ ಕಟ್ಟಡವಲ್ಲ. ಮನೆಯಾಗಬೇಕು. ಅಂತಹಾ ಹಲವಾರು ಕವಿತೆಗಳು "ಕತ್ತಲೆಗೆ ಎಷ್ಟೊಂದು ಬಣ್ಣ" ಸಂಕಲನದಲ್ಲಿದೆ.

 ಗಂಡಸು ಕೂಡ ಪ್ರೀತಿಸಬಲ್ಲ ಹಾಗು ಪ್ರೀತಿಸಲ್ಪಡಲು ಅರ್ಹನಾದವನು. ಜತೆಜತೆಯಾಗಿ ಸಾಗುವ ಚಲನೆಯಲ್ಲಿ ನಂಬಿಕೆ ಇರಬೇಕಿದೆ.

ದೂಳು ಕೂಡ ಮುಖ್ಯ ಎಂಬುದು ವೈಜ್ಣಾನಿಕ ಹಾಗು ಜಗತ್ತಿನ ಜೀವಂತಿಕೆಯ ಲಕ್ಷಣ. ದೂಳಿಗೆ ಹೆದರದೇ ಬದುಕಬೇಕಿದೆ‌.

ಎಲ್ಲಾ ಪ್ರಾಣಿಗಳು ಭಾವಕ್ಕನುಗುಣವಾಗಿ ನೃತ್ಯ ಮಾಡುತ್ತವೆ. ಮನುಷ್ಯ ನೃತ್ಯ ಮಾಡುವುದಿಲ್ಲ. ಹಾಗಾಗಿ ಸಮಸ್ಯೆಗೆ ಸಿಲುಕಿದ್ದಾನೆ‌.

ಜಗತ್ತು ಚೆನ್ನಾಗಿರಬೇಕು ಅಂದರೆ ಎಲ್ಲರೂ ಕಾವ್ಯದ ಸಂಪರ್ಕಕ್ಕೆ ಬರಬೇಕಿದೆ. ಆಗ ಮನಸು ಸರಿಯಾದ ರೀತಿಯ  ಕಾಣ್ಕೆಯನ್ನು ಸಮಾಜಕ್ಕೆ ನೀಡುತ್ತದೆ.


- ಸವಿತಾ ನಾಗಭೂಷಣ

ಕೃತಿಗಳನ್ನು ನೋಡುವ ಶಕ್ತಿ ವಿಮರ್ಶೆಗಿಲ್ಲ...

 ಕಾವ್ಯ ಮುರಿದು ಕಟ್ಟುವ ಕ್ರಿಯೆ. ಅಂತಹಾ ಕೆಲಸ ನಿರಂತರವಾಗಿ ನಡೆಯಬೇಕಿದೆ.

ಗಂಡುಲೋಕ ಯಾವ ವಿಚಾರಗಳನ್ನು ಇಟ್ಟುಕೊಂಡು ಹೆಣ್ಣನ್ನು ಶೋಷಣೆ ಮಾಡುತ್ತಿದ್ದರೋ ಅದೇ ವಿಚಾರಗಳನ್ನು ಶಸ್ತ್ರ ಮಾಡಿಕೊಂಡು ಜಗತ್ತಿನ ಮುಂದೆ ನಿಲ್ಲಬೇಕಿದೆ. ಈ ರೀತಿಯಾಗಿ ಅಕ್ಕಮಹಾದೇವಿ ನಮಗೆ ಕೊಟ್ಟ ಮಾದರಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ‌.

ಕನ್ನಡ ಸಾಹಿತ್ಯಲೋಕ ಕಾವ್ಯವನ್ನು ವಿಮರ್ಶೆ ಮಾಡುವ ಶಕ್ತವಾಗಿಲ್ಲ‌. ಅದರಲ್ಲೂ ಸ್ತ್ರೀ ಲೋಕದ ಕಾವ್ಯವನ್ನು ಮುಟ್ಟಲೂ ಆಗಿಲ್ಲ.

- ಡಾ. ಬಿ ಆರ್ ರವಿಕಾಂತೇಗೌಡ


ವಿಮರ್ಶೆ ಬರೆದು ದಕ್ಕಿಸಿಕೊಳ್ಳಲು ಕಷ್ಟ.

ವಿಮರ್ಶೆ ಸಹಿಸಿಕೊಳ್ಳುವ ಮನಸ್ಥಿತಿ ಬರೆಯುವವರಿಗೆ ಇಲ್ಲ. ವಿಮರ್ಶೆ ಬರೆದು ದಕ್ಕಿಸಿಕೊಳ್ಳಲು ಕಷ್ಟ. ಅಳಿವಿನಂಚಿನ ಸಾಹಿತ್ಯ ಸಂಗತಿಗಳನ್ನು ಗ್ರಹಿಸಲು ನಮ್ಮದೇ ಭಾಷೆಯ, ನಮ್ಮದೇ ನೆಲದ ಮಾದರಿಗಳಿಲ್ಲ.

ಪ್ರಬಂಧ ಪ್ರಕಾರವನ್ನು ಹೆಚ್ಚು ದಕ್ಕಿಸಿಕೊಳ್ಳಬೇಕಿದೆ. ಕತ್ತಲೆ ಅಮಂಗಳ ಅನ್ನುವ ರೀತಿಯ ಮಾತುಗಳನ್ನು ಈಗಲೂ ಕೇಳುತ್ತೇವೆ.

ಗಂಡಸುಲೋಕಕ್ಕೆ ಹೆಣ್ಣು ಉಡುವ ಸೀರೆಯ ಭಾವನಾತ್ಮಕ ಸ್ಥಿತಿ ಹಾಗು ಅದಕ್ಕೆ ಬೇಕಾದ ಸಿದ್ದತೆ ಗೊತ್ತಿಲ್ಲ. ಸೀರೆಯ ಬಗ್ಗೆ ಗೊತ್ತಿಲ್ಲದೇ ಮಾತಾಡುವುದು ತಪ್ಪಾಗುತ್ತದೆ.

- ಹುಲಿಕುಂಟೆ ಮೂರ್ತಿ


ಬೆಂಗಳೂರಿನ ಆಚೆಗೂ ಸಾಹಿತ್ಯವಿದೆ

ಹಾಸನದಿಂದ ಬೆಂಗಳೂರಿಗೆ ಬಂದು ಕಾರ್ಯಕ್ರಮ ಮಾಡುವ ಉದ್ದೇಶವಿಷ್ಟೇ. ಸಾಂಸ್ಕೃತಿಕ ಶಕ್ತಿ ಕೇಂದ್ರವೂ ಆಗಿರುವ ರಾಜಧಾನಿಗೆ ರಾಜ್ಯದ ಇತರೆಡೆಯ ಸಾಹಿತ್ಯ, ಸಂಸ್ಕೃತಿಗಳ ಪರಿಚಯ ಮಾಡಿಕೊಡಬೇಕು ಹಾಗು ಅದರ ಜೊತೆಗೆ ಬೆಂಗಳೂರನ್ನು ಮತ್ತೆ ಹಳ್ಳಿ, ಹೋಬಳಿ, ತಾಲೂಕುಗಳಿಗೆ ವಾಪಾಸು ಕರೆದುಕೊಂಡು ಹೋಗುವ ಸದುದ್ದೇಶವಿದೆ.

- ಚಲಂ ಹಾಡ್ಲಹಳ್ಳಿ

ಕವಿಗೆ ನಿಜ ಹೇಳದೇ ಬೇರೆ ದಾರಿಯಿಲ್ಲ‌. 

ಕವಿತೆಯನ್ನು ಸರಿಯಾದ ಗ್ರಹಿಕೆ ಸಾಧ್ಯವಿಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ‌. ಕವಿಗೆ ಬೇಕಾದದುದರ ಬಗ್ಗೆ ಅತೀವವಾದ ನಂಬಿಕೆ ಹಾಗು ಹೇಳಬೇಕಾದುದನ್ನು ಹೇಳುವ ಪ್ರಾಮಾಣಿಕತೆ ಇರಬೇಕಿದೆ.

ಸಾಮಾನ್ಯದಲ್ಲಿ ಅಸಮಾನ್ಯವಾದುದು ಇರುತ್ತೆ. ಅಸಮಾನ್ಯದಲ್ಲಿ ಸಾಮಾನ್ಯವೂ ಇರುತ್ತದೆ. ಆ ಸಾಧ್ಯತೆ ದುಡಿಸಿಕೊಳ್ಳುವುದು ಸಾಹಿತ್ಯದ ಜವಬ್ದಾರಿ.

ನಿತ್ಯದ ಗಾಣದಿಂದ ತಪ್ಪಿಸಿಕೊಳ್ಳಲು ಆಗದ ತಪ್ಪಿಸಿಕೊಳ್ಳಲು‌ ಇಷ್ಟವೂ ಅಲ್ಲದ ಹೆಣ್ಣುಲೋಕದ ತಲ್ಲಣಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ‌.

ಕವಿಗೆ ನಿಜ ಹೇಳದೇ ಬೇರೆ ದಾರಿಯಿಲ್ಲ‌. ಕವಿತೆಯ ದಾರಿ ಹಾಗು ಗಮ್ಯ ನಿಜವೇ ಆಗಿದೆ.

- ಡಾ. ಬಂಜಗೆರೆ ಜಯಪ್ರಕಾಶ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು